ಪುಟ:Chirasmarane-Niranjana.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 "ನಿನ್ನ ಅಜ್ಜೀನ ಕೇಳು ಹಾಗಾದರೆ." "ಸರಿ, ಸರಿ. ಆಕೇನ ಕೇಳಿ .ಆ ವಸ್ತು ಸಿಕ್ಕಿದ ಹಾಗೇ!" "ಇದೊಳ್ಳೇ ಗೋಳು ಹೊಯ್ಕೊಳ್ತಿದ್ದೀಯಲ್ಲೋ ನನ್ಹತ್ರ ದುಡ್ಡಿಲ್ಲ." "ಹಾಗಾದರೆ ನಾನು,ಕಾಸರಗೋಡಿಗೋ ಮಂಗಳೂರಿಗೋ ಹೊರಠೋ ಗಿ ಏನಾದರೂ ಕೂಲಿ ಕೆಲ್ಸಮಾಡಿ ಸಂಪಾದ್ಸಿ , ಬ್ಯಾಟ್ರಿ ಕೊಂಡ್ಕೊಂಡು ಮನೆಗೆ ಬರ್ತೇನೆ." ಚಿರುಕಂಡ ನಕ್ಕು ಹೇಳಿದ: "ಒಂದೇ ತರ್ತೀಯೇನು? ನನಗೂ ಒಂದು ತಂದರೆ ಏನಾದೀತೂ?" "ಸಾಕು ತಲೆಹರಟೆ !" ಎಂದಳು ತಾಯಿ ಸ್ವರವೇರಿಸಿ. ಅಪ್ಪು ಹಾಗೆಲ್ಲ ಬಿಟ್ಟಕೊಡುವವನಲ್ಲ. "ಹಾಗಾದರೆ, ತೆಗೆಸ್ಕೊಡ್ತೇನೆ ಅನ್ನು." "ಜಾತ್ರೆ ಬರಲಿ ,ನೋಡೋಣ." "ನೋಡೋದೇನ್ಬಂತು? ಓಹೋಹೋ . ದುಡ್ಡಿದ್ದೇ ಇರ್ತದೆ ನನಗ್ಗೋತ್ತಿಲ್ವ? ಜಾತ್ರೆ ಖರ್ಚಿಗೇಂತ ಅಪ್ಪ ನಿನ್ನ ಕೈಗೆ ದುಡ್ಡು ಕೊಡದೆ ಇರ್ತಾನಾ?..." ತಾಯಿ ಮತ್ತೆ ಮಾತನಾಡದಿದ್ದರೂ ಒಂದು ಬ್ಯಾಟರಿ ಬರುವುದು ಖಂಡಿತ ಎಂದು ಅಪ್ಪುವಿಗೆ ಸಂತೋಷವಾಯಿತು. ಅವರು ಹಾದಿ ಕ್ರಮಿಸುತ್ತಿದ್ದಂತೆ ಒಮ್ಮೆಲೇ ತಣ್ಣಗೆ ಗಾಳಿ ಬೀಸಿತು. "ನೋಡಿದಿರಾ?ಆಗ್ಲೇ ಹೇಳ್ಲಿಲ್ವ ನಾನು  ?" ಮುಂದಾಗಿಯೇ ಸತ್ಯ ನುಡಿದ ಸಂತೃಪ್ತಿಯನ್ನು ಚಿರುಕುಂಡ ವ್ಯಕ್ತ ಪಡಿಸಿದ. "ಈಗ ನದೀಲಿ ಸ್ನಾನ ಮಾಡ್ಬೇಕು, ಅಲ್ವ ಚಿರುಕಂಡ?" ಇದು ಅಪ್ಪು ನಡೆಸಿದ ಇನ್ನೊಂದು ದಾಳ. ತಾಯಿ , ಮತ್ತೊಮ್ಮೆ ತನಗೆ ಸೋಲುವಂತೆ ಮಾಡುವ ಯತ್ನ. ಆದರೆ ಈ ಸಲ ಆಕೆ ಬಿಟ್ಟುಕೊಡುವ ಹಾಗಿರಲಿಲ್ಲ . ಗದರಿ ನುಡಿದಳು: "ನೀನೆಲ್ಲಾದರೂ ನದೀ ಕಡೆ ಹೊರಟ್ಬಿಡು ಇವತ್ತು , ನಿಮ್ಮಪ್ಪನಿಗೆ ಹೇಳಿ ನಿಮಗಿಬ್ಬರಿಗೂ ಶಾಸ್ತಿ ಮಾಡಿಸ್ತೇನೆ ." ಅಪ್ಪುವಿಗೆ ನಗು ಬಂತು. "ಅವನನ್ಯಾತಕ್ಕೆ ನನ್ಜತೇಲಿ ಸೇರಿಸ್ತೀಯ? ಅವನು ನದೀಲಿ ಸ್ನಾನ ಮಾಡೋದೇ ಇಲ್ಲ. ಮೀನು ಕಚ್ತದೆ ಅಂತ ಆತನಿಗೆ ಭಯ....ಅಲ್ವೇನೋ?" ಚಿರುಕಂಡ, ಮುಂದೆ ನಡೆಯುತ್ತಿದ್ದ ಅಪ್ಪುವಿನ ಬೆನ್ನನ್ನು ತನ್ನ ಬೆರಳಿಂದ