ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕಾಶಕರ ಮಾತು

ಕರ್ನಾಟಕ ಪ್ರಾಂತ್ಯದಲ್ಲಿರುವ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಕರಾವಳಿ ಪ್ರದೇಶದಲ್ಲಿದ್ದು, ಪ್ರಕೃತಿಯ ಸೊಬಗನ್ನು ನೀಡುವ ತವರೂರಾಗಿದೆ. ಹಲವಾರು ವರ್ಷಗಳ ಹಿಂದೆ ಕಾಸರಗೋಡು ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು, ಕೇರಳವನ್ನು ಸೇರಿಕೊಂಡಿದೆ. ಈಗ ಪುನಃ ನಮ್ಮೀ ಜಿಲ್ಲೆಯು ವಿಭಾಗವಾಗಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಾಗಿವೆ.

ನಮ್ಮ ಈ ಜಿಲ್ಲೆಯ ನದಿ ತೊರೆಗಳು, ಬೆಟ್ಟ ಬಯಲು, ಜನರ ನಡೆನುಡಿ, ಚರಿತ್ರೆ, ಭೌಗೋಳಿಕ ಸೌಂದರ್ಯ, ಜೀವನವೃತ್ತಿ ಇತ್ಯಾದಿಯನ್ನು ಒಳಗೊಂಡ ಒಂದು ಪುಸ್ತಕವನ್ನು ರಚಿಸಬೇಕೆಂದು ಅಪೇಕ್ಷಿಸಿದ್ದೆವು. ಹಿರಿಯ ವಿದ್ಯಾಂಸರಾದ ಶ್ರೀ ಎಂ. ಪ್ರಭಾಕರ ಜೋಷಿಯವರು ಶ್ರೀ ಗುರುರಾಜ ಮಾರ್‍ಬಳ್ಳಿಯವರ ಸಹಕಾರದೊಂದಿಗೆ ಪುಸ್ತಕವನ್ನು ಬರೆದು ಕೊಟ್ಟಿದ್ದಾರೆ. ಶ್ರೀ ಜೋಷಿಯವರು ಪ್ರಾಧ್ಯಾಪಕರು ಮಾತ್ರವಲ್ಲದೆ, ಪ್ರಸಿದ್ಧ ಯಕ್ಷಗಾನ ಅರ್ಥದಾರಿಗಳೂ, ಸಾಹಿತ್ಯ, ತತ್ವಜ್ಞಾನ, ಕಲೆ ಮುಂತಾದ ಹಲವಾರು ವಿಷಯಗಳ ಮೇಲೆ ಕೈಯಾಡಿಸಿದ ವ್ಯಕ್ತಿಯೂ ಹೌದು. ಮೇಲಾಗಿ ನಮ್ಮ ಸ್ನೇಹಿತರು. ಅವರಿಗೆ ಮತ್ತು ಈ ಕಾರ್ಯದಲ್ಲಿ ಸಹಕರಿಸಿದ ಅವರ ಶ್ರೀಮತಿ ಸುಚೇತಾ ಜೋಶಿಯವರಿಗೂ ನಮ್ಮ ತುಂಬು ಹೃದಯದ ಕೃತಜ್ಞತೆಗಳು. ಉತ್ತಮ ವಾಗ್ಮಿಯೂ, ದಕ್ಡ ಆಡಳಿತಗಾರರೂ ಆದ ಶ್ರೀ ವೈ. ಕೆ. ಸಂಜೀವ ಶೆಟ್ಟಿಯವರು ಮುನ್ನುಡಿಯನ್ನು ಬರೆದು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಇವರು ಜಿಲ್ಲಾ ಪಂಜಾಯತ್‌ ಅಧ್ಯಕ್ಷರಾಗಿ ಪ್ರಾಮಾಣಿಕವಾಗಿ ಜನಸೇವೆ ಸಲ್ಲಿಸಿ ಇವರು ಒಲವನ್ನು ಸಂಪಾದಿಸಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಈ ಪುಸ್ತಕದ ಪ್ರತಿ ಹಂತದಲ್ಲೂ ಹಲವಾರು ಸೂಚನೆ, ಸಲಹೆಗಳನ್ನಿತ್ತ ನಮ್ಮ ಮಿತ್ರರಾದ ಪ್ರಾ. ಶ್ರೀ ಎಂ. ರಾಘವೇಂದ್ರ ಪ್ರಭು ಮತ್ತು ಪ್ರಾ. ನಾಗರಾಜ ಜವಳಿ ಅವರಿಗೆ ನಮ್ಮ ನಮನಗಳು.

ಮುದ್ರಣವನ್ನು ಮಾಡಿಕೊಟ್ಟ, ಹೊಸದಿಗಂತದ ಮೆನೇಜಿಂಗ್‌ ಡೈರೆಕ್ಟರ್‌ ಶ್ರೀ ಅರವಿಂದ ಬಿಜೂರು ಮತ್ತು ಡಿ.ಟಿ.ಪಿ. ಕಾರ್ಯವನ್ನು ನಿರ್ವಹಿಸಿದ ಶ್ರೀ ಸಂದೀಪ್‌ ಇವರಿಗೂ ಮತ್ತು ಮುಖ ಪುಟ ವಿನ್ಯಾಸ ರಚಿಸಿದ ಶ್ರೀ ವಿಷ್ಣು ಸೇವಗೂರು ಇವರಿಗೂ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

ನಮ್ಮ ಈ ಹೊಸ ಪುಸ್ತಕವು ಸಾರ್ವಜನಿಕರಿಗೂ, ಶಾಲಾ ಕಾಲೇಜಿಗೂ, ಗ್ರಂಥಭಂಡಾರಗಳಿಗೂ ಸೇರುವಂಥಾಗಲಿ. ಇದರ ಸದುಪಯೋಗವಾಗಲಿ ಎಂದು ಬಯಸುತ್ತೇನೆ. ಕಳೆದ ಹತ್ತು ದಿನಗಳಲ್ಲಿ ವಿದ್ಯಾ ಪಬ್ಲಿಷಿಂಗ್‌ ಹೌಸ್‌ ಎರಡನೇ ಪುಸ್ತಕವನ್ನು ಹೊರತರುತ್ತಿದೆ ಎ೦ದು ಹೇಳಲು ಸಂತಸವಾಗುತ್ತದೆ.

ಈ ಮೂರು ವರ್ಷಗಳ ಬೆಳವಣಿಗೆಯಲ್ಲಿ ವಿದ್ಯಾ ಪಬ್ಲಿಷಿಂಗ್‌ ಹೌಸ್‌ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು ಜನ ಮೆಚ್ಚಿಗೆಗೆ ಪಾತ್ರವಾಗಿದೆ. ನಿಮ್ಮ ಒಲವಿನ ಈ ಶಿಶು ಇನ್ನೂ ಬೆಳೆಯುವಂತೆ ಆಶೀರ್ವದಿಸಿರಿ.


ಕೆ. ಅನಂತರಾಮ ರಾವ್‌
ಮೆನೇಜಿಂಗ್‌ ಪಾರ್ಟ್ನರ್‌
ವಿದ್ಯಾ ಪಬ್ಲಿಷಿಂಗ್‌ ಹೌಸ್‌,
'ಶ್ರೀ ನಿಲಯ', ಕದ್ರಿ, ಮಂಗಳೂರು.