ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಲಾಪ್ರಜ್ಞೆಯನ್ನು, ಕನ್ನಡ ಭಾಷೆಯ ಅರಿವನ್ನೂ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಸುಮಾರು ನಾಲ್ಕು ಶತಮಾನಗಳಿಗೂ ಮಿಕ್ಕಿದ ಇತಿಹಾಸವುಳ್ಳ ಈ ಕಲೆ ಸಂಗೀತ, ನೃತ್ಯ, ಸಾಹಿತ್ಯ, ಶಿಲ್ಪ, ಪುರಾಣ ವಸ್ತು ಮತ್ತು ಸಾಹಿತ್ಯಗಳ ಸುಂದರ ಮಿಶ್ರಣವಾಗಿದ್ದು ಪ್ರತಿಯೊಂದು ಅಂಗದಲ್ಲೂ ಖಚಿತ ಶೈಲಿಯನ್ನೂ ಅಸಾಧಾರಣ ಸೌಂದರ್ಯವನ್ನೂ ತುಂಬಿಕೊಂಡಿದೆ. ಚಂಡೆ, ಮದ್ದಳೆಗಳ ಮೈನವಿರೇಳಿಸುವ ಹಿಮ್ಮೇಳದೊಂದಿಗೆ, ಭಾಗವತರು ಹಾಡುವ ಪದ್ಯಗಳ ಆಧಾರದಲ್ಲಿ ಕುಣಿತ, ರಂಗ ತಂತ್ರಗಳೊಂದಿಗೆ ಪಾತ್ರಧಾರಿಯು ಸ್ವಂತ ಮಾತುಗಾರಿಕೆಯನ್ನು ಬೆಳೆಸಿ ರಚಿಸುವ ಈ ರಂಗಪ್ರಕಾರವು ಇಡಿ ರಾತ್ರಿ ನಡೆಯುವ ಪ್ರದರ್ಶನ.

ಯಕ್ಷಗಾನದಲ್ಲಿ ತೆಂಕು-ಬಡಗು ಎಂಬ ಎರಡು ಪ್ರಭೇದಗಳಿವೆ. ಪಡುಬಿದ್ರಿಯ ಉತ್ತರಕ್ಕಿರುವುದು ಬಡಗು ತಿಟ್ಟು, ದಕ್ಷಿಣಕ್ಕಿರುವುದು ತೆಂಕುತಿಟ್ಟು. ಇವುಗಳಲ್ಲಿ ವೇಷ, ನೃತ್ಯ, ಗಾನ, ವಾದನಗಳಲ್ಲಿ ವ್ಯತ್ಯಾಸವಿದ್ದರೂ ಅವು ಒಂದೇ ಕಲೆಯ ಎರಡು ಕವಲುಗಳು. ತೆಂಕುತಿಟ್ಟು ಹೆಚ್ಚು ತಾಂಡವ ಪ್ರಕೃತಿಯದು, ಬಡಗುತಿಟ್ಟು ಲಾಸ್ಯ ಸ್ವಭಾವದ್ದು.

ಇದೀಗ ಸುಮಾರು ಇಪ್ಪತ್ತು ಯಕ್ಷಗಾನ ಮೇಳಗಳೂ, ಇನ್ನೂರಕ್ಕೂ ಮಿಕ್ಕಿ ಹವ್ಯಾಸಿ ತಂಡಗಳು ಸಕ್ರಿಯವಾಗಿದ್ದು, ಮೇಳಗಳು ನವಂಬರ್ ಮೇ ತಿಂಗಳುಗಳ ಅವಧಿಯಲ್ಲಿ ನಿತ್ಯಪ್ರದರ್ಶನ ನೀಡುತ್ತ ಕರಾವಳಿ ಮಲೆನಾಡು ಪ್ರದೇಶಗಳಲ್ಲಿ ಸಂಚರಿಸುತ್ತವೆ.

ಆಧುನಿಕ ಕಾಲದ ಒತ್ತಡಗಳ ಮಧ್ಯೆಯೂ ತಿರುಗಾಟದ ಮೇಳಗಳು ಜೀವಂತವಾಗಿರುವುದು ಗಮನಾರ್ಹ ವಿದ್ಯಮಾನ. ವೇಷ ಭೂಷಣ ನೃತ್ಯಗಳಿಲ್ಲದೆ, ವೇದಿಕೆಯಲ್ಲಿ ಕುಳಿತು ಮಾತುಗಾರಿಕೆಯ ಮೂಲಕ ಪ್ರದರ್ಶನ ನಡೆಸುವ ತಾಳಮದ್ದಲೆ ಎಂಬ ಯಕ್ಷಗಾನ ಪ್ರಕಾರವು ತುಂಬ ವಿಶಿಷ್ಟವಾದದ್ದು. ಅಸಾಧಾರಣ ಪಾಂಡಿತ್ಯ ಕ್ಷೇತ್ರವಾಗಿದೆ. ವಿಶೇಷತಃ ಮಳೆಗಾಲದಲ್ಲಿ ತಾಳಮದ್ದಲೆಗಳ ಪ್ರದರ್ಶನ ಹೆಚ್ಚು. ಯಕ್ಷಗಾನವು ಗೊಂಬೆಯಾಟದ ರೂಪದಲ್ಲೂ ಪ್ರಚಲಿತವಿದೆ. ಸುಮಾರು ಸಾವಿರದ ಐನೂರು ಕುಟುಂಬಗಳು ವ್ಯವಸಾಯಿಕವಾಗಿ ಯಕ್ಷಗಾನವನ್ನು ಪ್ರತ್ಯಕ್ಷ ಪರೋಕ್ಷವಾಗಿ ಅವಲಂಬಿಸಿವೆ. ಜಿಲ್ಲೆಯಲ್ಲಿ ಎರಡು ಯಕ್ಷಗಾನ ಕೇಂದ್ರಗಳಿವೆ.

42