ಪುಟ:Duurada Nakshhatra.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಸರಿ ಹಾಗಾದರೆ. ನಾವು ಇನ್ನು ಶಂಕರಪ್ಪನವರಲ್ಲಿಗೆ ಹೋಗೋಣವೋ?"

ನಂಜುಂಡಯ್ಯ ಜಯದೇವನ ಮುಖ ನೋಡಿದರು. ಆತ ಶಂಕರಪ್ಪನವರ ಮನೆಗೆ ಬರುವುದು ಅವರಿಗೆ ಇಷ್ಟವಿರಲಿಲ್ಲ. ಜಯದೇವನಿಗೂ ಇಷ್ಟವಿರಲಿಲ್ಲ, ಜಯದೇವನ ವಿಚಿತ್ರ ವ್ಯಕ್ತಿತ್ವದ ವಿಷಯವಾಗಿ ವೆಂಕಟರಾಯರಿಗೆ ತಿಳಿಯ ಹೇಳುವುದೂ ಅಗತ್ಯವೆಂದು ನಂಜುಂಡಯ್ಯ ಭಾವಿಸಿದ್ದರು! ಇವರಿಬ್ಬರಿಂದ ಸದ್ಯ ಬೇರೆಯಾಗಿ ರಂಗರಾಯರನ್ನು ನೋಡಹೋಗಬೇಕೆಂಬುದು ಜಯದೇವನ ಯೋಚನೆಯಾಗಿತ್ತು.

"ಜಯದೇವ, ನೀವೊಂದು ಉಪಕಾರ ಮಾಡಿ, ನಾವಿಬ್ರೂ ಶಂಕರಪ್ಪನವರ ಮನೆಗೆ ಹೋಗ್ತೀವಿ. ನೀವು ಸ್ಕೂಲ್ನಿಂದ ವೆಂಕಟರಾಯರ ಬೆಡ್ಡಿಂಗು ಸೂಟ್ ಕೇಸು ಅದೇನೇನಿದೆಯೋ ಅದೆಲ್ಲಾ ಕಳಿಸ್ಕೊಡಿ. ನಮ್ಮ ವಿದ್ಯಾರ್ಥಿಗಳು ಯಾರಾದರೂ ಸಿಕ್ಕಿದರೆ ಸರಿ. ಇಲ್ದೇ ಹೋದ್ರೆ ಯಾವನಾದರೂ ಕೂಲಿ ಕೈಲಿ ಕೊಟ್ಟು ಕಳಿಸಿ "

... ಕೂಲಿಯ ಕೈಯಲ್ಲಿ ಕಳುಹಿಸುವ ಮಾತಿರಲಿಲ್ಲ. ಸ್ವತಃ ಜಯದೇವನೇ ಹೊರಿಸಿಕೊಂಡು ಬರಬೇಕು. ಹಾಗೆ ತಂದರೆ ದುಡ್ಡು ಕೊಡುವ ಪ್ರಶ್ನೆ...

ಸೂಕ್ಷ್ಮಮತಿಗಳಾಗಿದ್ದರು ವೆಂಕಟರಾಯರು.

“ಅದೊಂದೂ ಬೇಡ ವಮಿ. ನಂಜುಂಡಯ್ಯ, ಹೀಗ್ಮಾಡೋಣ.”

“ಏನು ಹೇಳಿ?

“ನೀವು ಸ್ಕೂಲ್ನಲ್ಲೇ ಇರ್ತೀರಿ ಅಲ್ವೇನಪ್ಪ ಜಯದೇವ್"

ಉತ್ತರ ತಡವರಿಸಿದಂತಾದರೂ ನಿಮಿಷಾರ್ಧದಲ್ಲೆ ಸುಧಾರಿಸಿಕೊಂಡು ಜಯದೇವ ಗಟ್ಟಿಯಾಗಿಯೇ ಹೇಳಿದ:

“ಇರ್ತೀನಿ ಸಾರ್.”

“ಹಾಗಾದ್ರೆ, ಶಂಕರಪ್ಪನವರ ಮನೆಯಿಂದ ಅವರ ಆಳನ್ನ ಕಳಿಸ್ಕೊಡೋಣ. ಆಗ್ದೆ ಮಿ. ನಂಜುಂಡಯ್ಯ?

'ಓಹೋ, ಹಾಗೇ ಆಗಲಿ.”

ಜಯದೇವ ಅವರಿಬ್ಬರನ್ನೂ ಅತ್ತ ಕಳುಹಿಸಿ, ತಾನು ಶಾಲೆಯತ್ತ ನಡೆದ.. ಕಾಲುಗಳು ಪ್ರಯಾಸಪಟ್ಟು ದೇಹವನ್ನು ಒಯ್ಯುತ್ತಿದ್ದಂತೆ ತೋರಿತು.