ಪುಟ:Duurada Nakshhatra.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅದೂ ಜಯದೇವ ಊಹಿಸದೇ ಇದ್ದ ವಿಷಯವಾಗಿತ್ತು, ಆ ಕೊಂಪೆಗೊಂದು ಹೈಸ್ಕೂಲು....

“ಹೈಸ್ಕೂಲು ತೆರೆಯೋಕೆ.ವಿದ್ಯಾರ್ಥಿಗಳು ಸಾಕಷ್ಟ ಇದಾರೆ ಅಲ್ವೆ?

“ಇಲ್ದೆ ಏನು? ಈ ರೇಂಜಿನವರೆಲ್ಲಾ ಬರ್ತಾರೆ. ಊರೂ ಬೆಳೆಯುತ್ತೆ.”

ನಾಳೆಯ ದಿನ ಬೆಳೆಯುವ ಬದಲಾಗುವ ಕಲ್ಪನೆಯ ಚಿತ್ರ ಸೊಗಸಾಗಿತ್ತು, ರಂಗರಾಯರೂ ಅಂದಿದ್ದರು-ಕನಸು ಕಾಣುವುದು ಒಳ್ಳೆಯದೆಂದು. ಆ ವಿಷಯದಲ್ಲಿ ನಂಜುಂಡಯ್ಯ ರಂಗರಾಯರಿಬ್ಬರಲ್ಲೂ ಒಂದೇ ಗುಣವಿತ್ತು.

“ಇಷ್ಟು ಚಟುವಟಿಕೆ ಉತ್ಸಾಹ ಇರೋ ಊರು ಸಿಕ್ಕಿದ್ದು ನನ್ನ ಭಾಗ್ಯ” ಎಂದ ಜಯದೇವ ಮರುಕ್ಷಣವೆ, ನಂಜುಂಡಯ್ಯನವರ ಪ್ರೀತ್ಯರ್ಥವಾಗಿ ತಾನು ಹಾಗೆ ಹೇಳಿದೆನೆ, ಎಂಬ ಯೋಚನೆಯುಂಟಾಗಿ ಮನಸ್ಸಿನಲ್ಲಿ ಕಸಿವಿಸಿಯೆನಿಸಿತು

.ನಂಜುಂಡಯ್ಯ-ಜಯದೇವ ಇಬ್ಬರು ಶಾಲೆಗೆ ಹೊರಟರು, ಹೊಸ ಉಪಾಧ್ಯಾಯರು ತಮ್ಮ ಮನೆಗೆ ಊಟಕ್ಕೆ ಬಂದಿದ್ದರೆಂಬ ಹೆಮ್ಮೆಯಿಂದ ಉಬ್ಬಿದ್ದು ವಿರೂಪಾಕ್ಷನೂ ಪಾಠದ ಪುಸ್ತಕಗಳನ್ನೆತ್ತಿಕೊಂಡು ಅವರಿಬ್ಬರ ಹಿಂದೆಯೇ ನಡೆದ.

ಹಾದಿ ಸಾಗುತಿದ್ದಂತೆ ನಂಜುಂಡಯ್ಯನೆಂದರು

“ನಾನು ತಿಳಿಸಿದ ವಿಷಯ ದಯವಿಟ್ಟ ನಿಮ್ಮಲ್ಲೇ ಇರ್ಲಿ, ರಂಗರಾಯರಿಗೆ ಹೇಳ್ಬೇಡಿ.”

“ಇಲ್ಲ ಇಲ್ಲ. ನಾನ್ಯಾಕೆ ಹೇಳ್ಲಿ?

ಹಾಗನ್ನುತಾ ಜಯದೇವ ವಿರೂಪಾಕ್ಷನನ್ನ ನೋಡಿದ. ಆ ಹುಡುಗನೆದುರಿನಲ್ಲಿ ಈ ಮಾತನ್ನು ನಂಜುಂಡಯ್ಯ ಆಡಬಾರದಿತ್ತು ಎನಿಸಿತು ಜಯದೇವನಿಗೆ. ಮುಗ್ದನಾದ, ಒಳ್ಳಿತಿನ ಬಗೆಗೆ ಗೌರವವಿದ್ದ, ಹೊಸತಿನ ಬಗೆಗೆ ಕುತೂಹಲವಿದ್ದ ಹುಡುಗ. ಅವನ ಮನಸ್ಸಿನಲ್ಲೀಗ ಕಲ್ಮಷವೇನೂ ಇರುವುದು ಸಾಧ್ಯವಿರಲಿಲ್ಲ, ಆದರೆ ಇಂತಹ ಮಾತುಗಳನ್ನು ಕೇಳುತ್ತ ಹೋದಂತೆ ಸಂದೇಹಗಳು ಮೂಡಬಹುದು. ದೃಷ್ಟಿ ಕಲುಷಿತವಾಗಬಹುದು. ಒಳ್ಳೆಯ ಮನಸಿಗೆ ಆತುಕೊಂಡು ಅಲ್ಪ ವಿಚಾರಗಳ ಬದನಿಕೆ ಬೆಳೆಯಬಹುದು.