ಪುಟ:Duurada Nakshhatra.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ನೀವು ಭಾಗ್ಯಶಾಲಿ, ಒಬ್ಬರೇ ಇದ್ದೀರ! ಭುಜಕ್ಕಿನ್ನೂ ನೊಗ ತಗಲಿಸಿಕೊಂಡಿಲ್ಲ !”

ಬೆಂಗಳೂರಲ್ಲಿ ಆವರೆಗೂ ಯಾರೂ ಆ ರೀತಿ ಜಯದೇವನನ್ನು ಲೇವಡಿ ಮಾಡುತ್ತಿರಲಿಲ್ಲ, ಯಾಕೆಂದರೆ ಅವರೆಲ್ಲರ ಪಾಲಿಗೆ ಆತ ವಿದ್ಯಾರ್ಥಿ, ಈ ಊರಲ್ಲಾದರೆ ಹಾಗಲ್ಲ, ಜಯದೇವ, ಶಾಲೆಯ ಉಪಾಧ್ಯಾಯ, ಸಂಬಳ ಎಷ್ಟಾದರೇನಂತೆ? ತಿಂಗಳ ಸಂಪಾದನೆಯಿದೆ. ಯಾಕಿನ್ನೂ ಮದುವೆಯಿಲ್ಲ?ಎಂದು ಹತ್ತಾರು ಜನ ಕೇಳುವುದರಲ್ಲಿ ಆಶ್ಚರ್ಯವೇನಿತ್ತು?

ಪ್ರತಿಯೊಬ್ಬ ಗಂಡಸೂ ಹೊತ್ತುಕೊಳ್ಳಬೇಕಾದ ನೊಗದ ಮಾತನ್ನೆತ್ತಿ ನಂಜುಂಡಯ್ಯ ನಕ್ಕರು. ಜಯದೇವನಿಗೂ ನಗು ಬಂತು.

ಅಷ್ಟರಲ್ಲೇ ದೃಷ್ಟಿಯಎದುರು ಕಾಣಿಸಿದ ಶಾಲೆಯಿಂದ ಬಾರಿಸಿದ ಘಂಟೆಯ ಸದ್ದು ಕೇಳಿಸಿತು. ಜಯದೇವ ನಗು ನಿಲ್ಲಿಸಿ ಮುಖ ಸಪ್ಪಗೆ ಮಾಡಿಕೊಂಡ.

-ತಡವಾಗಿತ್ತು, ಮೊದಲ ದಿನವೇ!

ನಂಜುಂಡಯ್ಯ ಜಯದೇವನ ಮುಖದ ಮೇಲಿನ ಭಾವನೆಯನ್ನು ಗಮನಿಸಿ, ಬೇಗ ಬೇಗನೆ ಹೆಜ್ಜೆ ಇಟ್ಟರು.

“ಬನ್ನಿ, ರಂಗರಾಯರು ಪಾಠಪಟ್ಟಿ ಹಾಗೆ ಸಿದ್ಧಪಡಿಸಿ ಇಟ್ಟಿದಾರೋ ನೋಡೋಣ.”