ಪುಟ:Duurada Nakshhatra.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೋಡಿಯೇ ತಿಳ್ಕೊಂಡೆ. ಹುಡುಗರು ನಿಮಗೆ ಅಂಟ್ಕೊತಾರೆ. ಪಾಠ ಮಾಡೋದು ಲೀಲಾಜಾಲವಾಗಿ ಬರುತ್ತೆ ನಿಮಗೆ.”

ಏನಾದರೂ ಮಾರುತ್ತರ ಕೊಡಬೇಕೆಂದು ಜಯದೇವ ತೊದಲಿದ. ಆದರೆ ಮಾತುಗಳು ಗಂಟಲೊಳಗೇ ಸಿಲುಕಿಕೊಂಡವು.

ಮುಖ್ಯೋಪಾಧ್ಯಾಯರೇ ಹೇಳಿದರು :

“ಮೂರು ಜನ ನಾಲ್ಕು ತರಗತಿಗಳಿಗೆ ಪಾಠ ಹೇಳ್ಕೊಡೋದು ಸುಲಭ ಅಲ್ಲ, ಒಂದೊಂದು ಪೀರಿಯಡು ಲೆಕ್ಕ ಪಕ್ಕ ಅಂತ ಮಂತ್ರ, ತಂತ್ರ ಮಾಡ್ಬೇಕು. ನೋಡಿ ಜಯದೇವ್, ನಾಲ್ಕನೆ ತರಗತಿಯವರ್ಗೂ ನೀವೇ ಕನ್ನಡ ತಗೊಂಡ್ಬಿಡಿ. ಸುಲಭ... ಏನಂತೀರಾ ?

"ಆಗಲಿ ಸಾರ್."

" ಬೇರೇನೂ ಅನ್ನುವ ಹಾಗಿರಲಿಲ್ಲ. ರಂಗರಾಯರು ಮಧಾಹ್ನದ ಊಟಕ್ಕೆಂದು ಮನೆಗೆ ಹೋದರು. ಇಷ್ಟೊಂದು ತಡವಾಗಿ ಊಟಮಾಡ್ತಾರಲ್ಲ-ಎಂದುಕೊಂಡ ಜಯದೇವ.

ನಂಜುಂಡಯ್ಯ ಕೊಠಡಿಯೊಳಕ್ಕೆ ಬಂದವರೇ ಕೇಳಿದರು :

"ತಿಂಡಿ ಏನು ತರಿಸೋಣ ಜಯದೇವ್?"

“ತಿಂಡಿ?”

“ಹೂಂ.. ಉಪಹಾರಕ್ಕಿರೋದು ಕಣ್ರೀ ಈ ವಿರಾಮ!”

“ನಿಮ್ಮನೆ ಊಟ ಭರ್ಜರಿಯಾಗಿತ್ತು ಅದಾದ್ಮೇಲೆ-”

ఆ ಹೊಗಳಿಕೆಯಿಂದ ನಂಜುಂಡಯ್ಯನಿಗೆ ಉಂಟಾದ ಸಂತೃಪ್ತಿ, ತುಟಿಗಳ ಮಾಸಿದ ಕನ್ನಡಿಯ ಮೇಲೆ ಕಂಡೂ ಕಾಣದಂತೆ ನಗೆಯಾಗಿ ಪ್ರತಿಬಿಂಬಿಸಿತು. -

“ಆ ಊಟ ಯಾವ ಲೆಕ್ಕಕ್ಕೆ? ನಿಮ್ಮ ವಯಸ್ನಲ್ಲಿ ನಾನು-ನಾನ್ಯಾಕೆ ಹೇಳ್ಲಿ ಅದನ್ನ? ಬೆಂಗಳೂರಿಗೆ ಹೋದಾಗ ಬಳೇಪೇಟೆ ಹೋಟ್ಲಲ್ಲಿ ನೀವೇ ವಿಚಾರ್ಸಿ... ಈಗ ಹೇಳಿ, ಇಡ್ಲಿ-ವಡೆ ತರೋಣ್ವೊ?”

ಜಯದೇವ ಒಪ್ಪಿಕೊಳ್ಳದೆ ನಿರ್ವಾಹವಿರಲಿಲ್ಲ.

“ಆದರೆ ಒಂದು ಶರತು ಸಾರ್, ದುಡ್ಕೊಡೋನು ನಾನು!

“ಯಾಕೊ ! ಇವತ್ತು ಒಂದಿನ ಸುಮ್ನಿದ್ಬಿಡಿ. ನಾಳೆಯಿಂದ ನೀವೇ ಕೊಟ್ಟರಾಯ್ತು, ಬೇಡಾ ಅಂತ ನಾನೇನೂ ತಡೆಯೊಲ್ಲ...”