ಪುಟ:Duurada Nakshhatra.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೂರನೆಯು ತರಗತಿ ಜಯದೇವನ ತಲೆನೋವಿಗೆ ಕಾರಣವಾಯಿತು. ಕರಿಹಲಗೆಯ ಮೇಲೆ ಯಾರೋ ಆತನ ವ್ಯಂಗ್ಯಚಿತ್ರ ಬರೆದಿದ್ದರು. ಜಯದೇವ ಮುಗುಳ್ನಗುತ್ತಲೆ ಅದನ್ನು ಒರೆಸಿದ.

“ಚಿತ್ರ ಚೆನಾಗಿದೆ. ಇದನ್ನು ಬರೆದ ಕಲಾವಿದ ಯಾರು ? ಎಂದು ಹುಡುಗರನ್ನೆಲ್ಲ ಸೂಕ್ಷ್ಮವಾಗಿ ನೋಡುತ್ತ ಪ್ರಶ್ನಿಸಿದ. ಉತ್ತರ ಬರಲಿಲ್ಲ.

“ಯಾರ್ರೀ ಮಾನಿಟರ್ ಈ ತರಗತಿಗೆ?

ಆ ಪ್ರಶ್ನೆಗೆ ಉತ್ತರವಾಗಿ ಬಲು ಕಿರಿಯವನಾದ ಶ್ರೀನಿವಾಸಮೂರ್ತಿ ಎದ್ದು ನಿಂತ. ಭಯಲಜ್ಞೆಗಳು ಅವನ ಮುಖವನ್ನು ಮುಸುಕಿದ್ದುವು.

“ಚಿತ್ರಕಾರರ ಪರಿಚಯ ಮಾಡ್ಕೊಟ್ಟರಾಗ್ದೆ?

ಜಯದೇವ ಇಷ್ಟಪಡದೇ ಇದ್ದರೂ ವ್ಯಂಗ್ಯಮಿಶ್ರಿತವಾಗಿ ಹೊರಬಿತ್ತು ಧ್ವನಿ.

ಹುಡುಗ ಗಳಗಳನೆ ಅತ್ತುಬಿಟ್ಟ. ಅವನದೊಂದೇ ಹಾಡು:

“ನನಗೆ ಮಾನಿಟರ್ ಕೆಲಸ ಬೇಡಿ ಸಾರ್, ಬೇಡಿ ಸಾರ್.”

ಜಯದೇವನಿಗೆ ಅರ್ಥವಾಗಲಿಲ್ಲ, ಯಾಕೆ-ಏನು-ಎಂದು ಆತ ಮತ್ತೆ ಮತ್ತೆ ಕೇಳಿದ. ಬಂದ ಉತ್ತರ ಒಂದೇ:

“ನನಗೆ ಈ ಕೆಲಸ ಬೇದಿ ಸಾರ್.

ವ್ಯಂಗ್ಯ ಚಿತ್ರದ ವಿಷಯ ಜಯದೇವನಿಗೆ ಮರೆತೇ ಹೋಯಿತು. ಈ ಹಿರೇಮಣಿಯ ಅಳು ಪ್ರಕರಣ, ಅವನ ಮನಸ್ಸಿನ ನೆಮ್ಮದಿಯನ್ನು ಕೆಡಿಸಿತು. ಪಾಠ ತಡವಾಗುತ್ತಿದೆಯೆಂದು ಆತ ಚಡಪಡಿಸಿದ.

“ಯಾಕೋ? ಯಾಕಪ್ಪ?”

ಉತ್ತರ–ಯಾವ ನಿರ್ಬಂಧವೂ ಇಲ್ಲದೆ ಹರಿಯುತಿದ್ದ ಕಣ್ಣೀರು.

“ಯಾರು ನಿನ್ನ ಚುನಾಯಿಸಿದ್ದು?”

“ಹೆಡ್ಮೇಷ್ಟ್ರು ಇದ್ದಾಗ್ಲೇ ಚುನಾಯ್ಸಿದ್ದು ಸಾರ್.”

“ಸರಿ ಹಾಗಾದರೆ, ಹೆಡ್ಮಷ್ಟ್ರಿಗೆ ಹೇಳ್ತೀನಿ.”