ಪುಟ:Duurada Nakshhatra.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಹೋದ ವರ್ಷ ಆ ಹುಡುಗನಿಗೆ ಬುದ್ದಿ ಕಲಿಸೋಕೆ ಪ್ರಯತ್ನಪಟ್ಟು ಅವನ ತಂದೆಯ-ಕೃಪಾಕಟಾಕ್ಷಕ್ಕೆ ನಾನು ಪಾತ್ರನಾದೆ. ಈ ವರ್ಷ ನಿಮ್ಮ ಸರದಿಯೇನೊ?”

“ಹುಡುಗ ಕೆಟ್ಟು ಹೋಗ್ಲಿದ್ದಾನೇಂತ ಅವನ ತಂದೆಗೆ ಗೊತ್ತಾಗಲ್ವೆ?”

“ಅವರು ಹಾಗೇಂತ ನಂಬೋದೇ ಇಲ್ಲ, ಅವರ ದೃಷ್ಟೀಲಿ ಈ ಮಹಾ ಪ್ರಚಂಡ ಸುಕುಮಾರ-ಸುಪುತ್ರ!”

ಜಯದೇವ ಸುಮ್ಮನಾದ. ರಂಗರಾಯರೂ ಸ್ವಲ್ಪ ಹೊತ್ತು ಮೌನವಾಗಿದ್ದು ಕೇಳಿದರು:

“ಮಾನಿಟರ್ ಶ್ರೀನಿವಾಸಮೂರ್ತಿ ಏನಂತಾನೆ?”

“ತನಗಿಂತ ದೊಡ್ಡವರ್ನ ಮಾನಿಟರ್ ಮಾಡಿ ಅಂತಾನೆ.”

“ನಾಳೆ ಪಾಠಕ್ಕೆ ಹೋದಾಗ ನೀವು ಹಾಗೇ ಮಾಡಿ ಜಯದೇವ, ಆ ಪೋಲಿಸ್ ಅಧಿಕಾರಿ ಮಗನನ್ನೇ ಮಾನಿಟರ್ ಮಾಡಿ. ಸಾಯಂಕಾಲ ಕ್ಲಾಸಿಗೆ ಹೋದಾಗ, ಹೊಸ ಮಾನಿಟರ್ ನೇಮಕ ನಾಳೆ ನೀವು ಮಾಡ್ತೀರೀಂತ ಹೇಳ್ತೀನಿ."

“ಹುಡುಗ್ರೇ ಚುನಾಯ್ಸೋದು ಬೇಡ್ವೆ?

“ಚುನಾವಣೆ ಮಾತು ಎಲ್ಬಂತು "ಜಯದೇವ!"

ನಂಜುಂಡಯ್ಯ ಒಳಬಂದರು. ಕೆಂಪಡರಿದ್ದ ಜಯದೇವನ ಮುಖಕ್ಷೋಭೆಯನ್ನು ತೋರುತಿತ್ತು.

“ಏನು ವಿಶೇಷ?” ಎಂದು ಕೇಳಿದರು ನಂಜುಂಡಯ್ಯ, ಸಿಗರೇಟು ಹಚ್ಚುತ್ತಾ.

ನಡೆದುದನ್ನು ಮತ್ತೊಮ್ಮೆ ಅವರೆದುರು ಹೇಳಿದಾಯಿತು. ನಂಜುಂಡಯ್ಯ ಏಕಪ್ರಕಾರವಾದ ಸ್ವರದಲ್ಲಿ ನುಡಿದರು :

“ಅದನ್ನೆಲ್ಲ ಮನಸ್ಸಿಗೆ ಹಚ್ಕೋಬೇಡಿ ಜಯದೇವ, ಆ ಚಿಕ್ಕ ಹುಡುಗ ಶ್ರೀನಿವಾಸಮೂರ್ತಿನ ಮಾನಿಟರ್ ಮಾಡಿದ್ದೆ ಸರಿಯಲ್ಲ. ಈಗಾದರೂ ಏನಂತೆ, ರಘುನಾಥನನ್ನೇ-ಅದೇ ಆ ಪೋಲೀಸ್ ಹುಡುಗಮಾನಿಟರ್ ಮಾಡಿದರಾಯಿತು. ಹಾಗೆ ಜವಾಬ್ದಾರಿ ಕೊಟ್ಟರೆ ಅವನ ನಡತೇನೂ ಸುಧಾರಿಸ್ಬಹುದು.”