ಪುಟ:Epigraphia carnatica - Volume I.djvu/೧೩

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆಮೊದಲ ಮಾತು

ಯಾವುದೇ ಪ್ರದೇಶದ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸಗಳ ಅಧ್ಯಯನಕ್ಕೆ ಶಾಸನಗಳು ಅಮೂಲ್ಯ ಆಕರಗಳು, ಶಾಸನಗಳು ಒಂದು ಜನಾಂಗದ ಆಸ್ತಿ. ಸುದೈವದಿಂದ ನಮ್ಮ ನಾಡಿನ ಶಾಸನ ಸಂಪತ್ತು ಹೇರಳವಾಗಿದೆ. ತಮಿಳನ್ನು ಬಿಟ್ಟರೆ ಕನ್ನಡದಲ್ಲಿಯೇ ಅತ್ಯಂತ ಹೆಚ್ಚು ಸಂಖ್ಯೆಯ ಶಾಸನಗಳಿವೆ ಎಂದು ಅಂದಾಜು ಮಾಡಲಾಗಿದೆ. ಯಾರ ಕಣ್ಣಿಗೂ ಬೀಳದೆ ಅಜ್ಞಾತವಾಗಿರುವ ಶಾಸನಗಳು ಇನ್ನೂ ಅಸಂಖ್ಯಾತವಾಗಿವೆ. ಇಂಥ ಶಾಸನಗಳನ್ನು ಹುಡುಕುವ ಸಂಗ್ರಹಿಸುವ ಪ್ರಕಟಿಸುವ ಕೆಲಸ ಆಗಬೇಕಾಗಿದೆ: ಈಗಾಗಲೇ ಪ್ರಕಟವಾಗಿರುವ ಶಾಸನಗಳನ್ನು ಪರಿಷ್ಕರಿಸುವ. ವಿಶ್ಲೇಷಿಸುವ ಕೆಲಸವೂ ಅಗತ್ಯವಾಗಿದೆ, ಹೊಸ ಆಧಾರಗಳ ಬೆಳಕಿನಲ್ಲಿ, ಹೊಸ ಸಂಶೋಧನೆಗಳ ದೃಷ್ಟಿಯಲ್ಲಿ ಈ ಕೆಲಸ ಸತತವಾಗಿ ನಡೆಯಬೇಕಾಗುತ್ತದೆ.

ಕನ್ನಡ ಶಾಸನ ಪ್ರಕಟಣೆಗಳಲ್ಲಿ ಮಾತ್ರವಲ್ಲ, ಯಾವುದೇ ಭಾಷೆಯ ಇಂಥ ಪ್ರಕಟಣೆಗಳಲ್ಲಿಯಾದರೂ "ಎಪಿಗ್ರಾಫಿಯ ಕರ್ನಾಟಿಕ" ಸಂಪುಟಗಳು ಒಂದು ಅಪೂರ್ವ ಸಿದ್ಧಿ; ಬೃಹತ್ತು ಮಹತ್ತುಗಳೆರಡರಲ್ಲಿಯೂ ಹೆಮ್ಮೆ ಪಡಬಹುದಾದ ಅದ್ವಿತೀಯ ಸಾಧನೆ. ೧೮೮೪ರಲ್ಲಿ ಮೈಸೂರಿನಲ್ಲಿ ಪುರಾತತ್ವ ಇಲಾಖೆ ಸ್ಥಾಪನೆಯಾದಾಗ ಅದರ ಒಪ್ಪೊತ್ತಿನ ನಿರ್ದೇಶಕರಾಗಿ ನೇಮಕಗೊಂಡ ಬಿ. ಎಲ್. ರೈಸ್ ಅವರು ೧೯೦೬ರವರೆಗಿನ ಮುಂದಿನ ಇಪ್ಪತ್ತೆರಡು ವರ್ಷಗಳ ಅವಧಿಯಲ್ಲಿ, ಅಂದಿನ ಮೈಸೂರು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮತ್ತು ಆಗ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗಿನಲ್ಲಿ ೮೮೬೯ ಶಾಸನಗಳನ್ನು ಸಂಗ್ರಹಿಸಿದರು. ಈ ಶಾಸನಗಳನ್ನೆಲ್ಲ ಲಿಪ್ಯಂತರ, ಭಾಷಾಂತರಗಳೊಡನೆ ಅವರು 'ಎಪಿಗ್ರಾಫಿಯ ಕರ್ನಾಟಿಕ' ಮಾಲೆಯಲ್ಲಿ ಪ್ರಕಟಿಸಿದರು. ಹನ್ನೆರಡು ಸಂಪುಟಗಳ ಈ ಮಾಲೆಯ ಯೋಜನೆಯಂತೆ ಸಾಮಾನ್ಯವಾಗಿ ಒಂದು ಜಿಲ್ಲೆಯ ಶಾಸನಗಳು ಒಂದು ಸಂಪುಟದಲ್ಲಿ ಸೇರಿದವು. ಶ್ರವಣಬೆಳಗೊಳದ ಶಾಸನಗಳಿಗಾಗಿಯೇ ಒಂದು ಸಂಪುಟ (೨) ಮೀಸಲಾಯಿತು. ಇಂದಿನ ಮಂಡ್ಯ ಜಿಲ್ಲೆಯನ್ನೊಳಗೊಂಡ ಅಂದಿನ ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಯ ಶಾಸನಗಳು ಎರಡೆರಡು ಸಂಪುಟಗಳಲ್ಲಿ (೩-೪ ಮತ್ತು ೭-೮) ಪ್ರಕಟವಾದವು. ರೈಸರ ನಂತರ ಅಧಿಕಾರಕ್ಕೆ ಬಂದ ಆರ್. ನರಸಿಂಹಾಚಾರರು ತಮ್ಮ ೧೬ ವರ್ಷಗಳ ಅಧಿಕಾರಾವಧಿಯಲ್ಲಿ ಸುಮಾರು ೫೦೦೦ ಶಾಸನಗಳನ್ನು ಕಂಡುಹಿಡಿದರು. ಇವುಗಳಲ್ಲಿ ಮುಖ್ಯವಾದವನ್ನೆಲ್ಲ ತಮ್ಮ ವಾರ್ಷಿಕ ವರದಿಗಳಲ್ಲಿ ಪ್ರಕಟಿಸುತ್ತಾ ಬಂದರು. 'ಎಪಿಗ್ರಾಫಿಯ ಕರ್ನಾಟಿಕ' ಮಾಲೆಯ ಎರಡನೆಯ ಸಂಪುಟವನ್ನು (ಶ್ರವಣಬೆಳಗೊಳ) ಅವರು ಅಮೂಲಾಗ್ರವಾಗಿ ಪರಿಷ್ಕರಿಸಿ ೧೯೨೩ರಲ್ಲಿ ಹೊಸ ಆವೃತ್ತಿಯನ್ನು ಪ್ರಕಟಿಸಿದರು. ಪುರಾತತ್ವ ಇಲಾಖೆ ೧೯೨೨ರ ನಂತರ ೧೯೪೪ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿತ್ತು. ಆಗ ಓರಿಯಂಟಲ್ ಲೈಬ್ರೆರಿಯ ಕ್ಯೂರೇಟರ್ ಅವರು ಇಲಾಖೆಗೆ ಒಪ್ಪೋತಿನ ನಿರ್ದೇಶಕರಾಗಿರುತ್ತಿದ್ದರು. ಆಮೇಲೆ ಅದು ಸರ್ಕಾರದ ಇಲಾಖೆಯಾದರೂ ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪ್ರಾಚೀನ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ವಿಭಾಗಗಳ ಮುಖ್ಯರು ಪದನಿಮಿತ್ತ ನಿರ್ದೇಶಕರಾಗಿದ್ದರು. ಉದ್ದಕ್ಕೂ ಇಲಾಖೆ ಶಾಸನ ಪರಿವೀಕ್ಷಣೆಯ ಕೆಲಸವನ್ನು ಮುಂದುವರಿಸಿಕೊಂಡು ಬಂದಿದೆ. ಫಲವಾಗಿ ವರ್ಷ ವರ್ಷವೂ ಹೊಸ ಶಾಸನಗಳು ಬೆಳಕಿಗೆ ಬರುತ್ತಿವೆ.

'ಎಪಿಗ್ರಾಫಿಯ ಕರ್ನಾಟಿಕ' ಸಂಪುಟಗಳು ಕಳೆದ ಕೆಲವು ದಶಕಗಳಿಂದ ತುಂಬ ದುರ್ಲಭವಾಗಿದ್ದು, ಅವುಗಳು ವಿದ್ಯಾರ್ಥಿಗಳಿಗೂ, ವಿದ್ವಾಂಸರಿಗೂ ಅನಿವಾರ್ಯ ಆಕರ ಗ್ರಂಥಗಳಾಗಿದ್ದುದರಿಂದ ಅವನ್ನು ಪರಿಷ್ಕರಿಸಿ ಪುನರ್ಮುದ್ರಿಸುವ ಅವಶ್ಯಕತೆ ಬಹಳವಾಗಿತ್ತು. ೧೯೭೦ರ ಜನವರಿ ೨೪ರಂದು ಮೈಸೂರು ರಾಜ್ಯದ ಶಿಕ್ಷಣ ಸಚಿವ ಶ್ರೀ ಕೆ. ವಿ. ಶಂಕರಗೌಡ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ, ಕರ್ಣಾಟಕ ಜೀವನ ಸಂಸ್ಕೃತಿಗಳನ್ನು ಕುರಿತ ಸಂಶೋಧನೆಗಳಿಗಾಗಿರುವ ಸಮನ್ವಯ ಸಮಿತಿಯ (Co-ordination Committee for Research work on Karnataka Life and Culture) ಸಭೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಈ ಪರಿಷ್ಕರಣ ಹಾಗೂ ಪುನರ್ಮುದ್ರಣದ ಸಲಹೆ ಮಾಡಿದರು: ಜವಾಬ್ದಾರಿಯನ್ನು ಹೊರಲು ಸಂಸ್ಥೆ ಸಿದ್ದವೆಂದೂ ಹೇಳಿದರು. ಸಮಿತಿಯ ಸದಸ್ಯರೆಲ್ಲರೂ ಅವರಿಗೆ ಬೆಂಬಲ ನೀಡಿದರು; ಸಲಹೆಯನ್ನು ಸ್ವಾಗತಿಸಿದರು, ಯೋಜನೆಯ ವಿವರಗಳನ್ನು ಕನ್ನಡ ಅಧ್ಯಯನ ಸಂಸ್ಥೆ ಸಿದ್ದಪಡಿಸ ಬೇಕೆಂದೂ, ಯೋಜನೆಗೆ ಅಗತ್ಯವಾದ ಹಣಕಾಸನ್ನು ಒದಗಿಸಲು ಸರ್ಕಾರಕ್ಕೆ ಶಿಫಾರಸ್ ಮಾಡಬೇಕೆಂದೂ, ಯೋಜನೆಯನ್ನು ಕನ್ನಡ ಅಧ್ಯಯನ ಸಂಸ್ಥೆಗೆ ವಹಿಸಬೇಕೆಂದೂ ಸಮಿತಿ ನಿರ್ಣಯಮಾಡಿತು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಯೋಜನೆಯ ವಿವರಗಳನ್ನು ಚರ್ಚಿಸಲು ಮಾರ್ಚಿ ೭, ೧೯೭೦ರಂದು ತಜ್ಞರ ಒಂದು ಸಭೆ ಕರೆದರು. ಅದರಲ್ಲಿ ಡಾ. ಎಂ. ಶೇಷಾದ್ರಿ, ಡಾ. ಜಿ. ಎಸ್. ಗಾಯಿ, ಮತ್ತು ಡಾ. ಎ. ವಿ. ನರಸಿಂಹಮೂರ್ತಿ ಅವರು ಭಾಗವಹಿಸಿದ್ದರು. ಆ ಸಭೆಯಲ್ಲಿ 'ಎಪಿಗ್ರಾಫಿಯ ಕರ್ನಾಟಿಕ' ಪರಿಷ್ಕರಣ ಹಾಗೂ ಪುನರ್ಮುದ್ರಣಕ್ಕೆ ಸಂಬಂಧಿಸಿದಂತೆ ಸುಮಾರು ಹನ್ನೆರಡೂವರೆ ಲಕ್ಷ ರೂಪಾಯಿಗಳ ಯೋಜನೆಯೊಂದನ್ನು ಸಿದ್ದಪಡಿಸಲಾಯಿತು. ಕನ್ನಡ