ಪುಟ:Epigraphia carnatica - Volume I.djvu/೨೫

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಬೆಂಜಮಿನ್ ಲೂಯಿ ರೈಸ್ ಪ್ರಾಚ್ಯ ವಿದ್ಯೆಯ ಹಿರಿಯ ವಿದ್ವಾಂಸರಲ್ಲೊಬ್ಬರಾಗಿದ್ದ ಬೆಂಜಮಿನ್ ಲೂಯಿ ರೈಸ್ ಅವರು ಹುಟ್ಟಿದುದು 1837ರ ಜುಲೈ 17ರಂದು. ಇಂಗ್ಲೆಂಡಿನಲ್ಲಿ ಅವರು ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಮೇಲೆ ಕೆಲಕಾಲ ಕೆಲಸದಲ್ಲಿದ್ದು, 1860 ರಲ್ಲಿ ಈ ದೇಶಕ್ಕೆ ಬಂದು ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾದರು. 1865ರಿಂದ 1868ರವರೆಗೆ ಮೈಸೂರು ಮತ್ತು ಕೊಡಗು ಸೀಮೆಗಳ ಶಾಲಾ ಇನ್ಸೆಕ್ಟರಾಗಿದ್ದು, ಅನಂತರ 1868ರಲ್ಲಿ ವಿದ್ಯಾಭ್ಯಾಸದ ಇಲಾಖೆಯ ಮುಖ್ಯಾಧಿಕಾರಿಯಾಗಿ ನೇಮಕಗೊಂಡರು. 1883ರ ವರೆಗೂ ಈ ಹುದ್ದೆಯಲ್ಲಿ ಮುಂದುವರೆದ ಅವರು ಆ ನಡುವೆ 1882ರಲ್ಲಿ ಹಂಟರ್ ವಿದ್ಯಾಸಮಿತಿಯ ಕಾರ್ಯದರ್ಶಿಯಾಗಿಯೂ ಕೆಲಸಮಾಡಿದರು. ಮೈಸೂರು ಸರ್ಕಾರವು 1884ರಲ್ಲಿ ಪುರಾತತ್ವ ಇಲಾಖೆಯನ್ನು ಆರಂಭಿಸಿದಾಗ ತಮ್ಮ ವಿದ್ಯಾಶಾಖೆಯ ಕೆಲಸದ ಜೊತೆಗೆ ಆ ಇಲಾಖೆಯ ಜವಾಬ್ದಾರಿಯನ್ನೂ ವಹಿಸಿಕೊಂಡರು. ಪ್ರಾಚ್ಯ ಸಂಶೋಧನೆಯ ಪ್ರಾಮುಖ್ಯವನ್ನು ಮನಗಂಡ ಸರ್ಕಾರವು 1890ರಲ್ಲಿ ರೈಸ್ ಅವರನ್ನು ಪುರಾತತ್ವ ಇಲಾಖೆಯ ಪೂರ್ಣಕಾಲದ ನಿರ್ದೇಶಕರನ್ನಾಗಿ ನೇಮಿಸಿತು. ಈ ಹುದ್ದೆಯಲ್ಲಿ ಅವರು 1906ರ ವರೆಗೂ ಇದ್ದು 22 ವರ್ಷಗಳ ಕಾಲ ಆ ಇಲಾಖೆಗೆ ಮಹತ್ತರವಾದ ಸೇವೆ ಸಲ್ಲಿಸಿ ತಮ್ಮ 70ನೇ ವಯಸ್ಸಿನಲ್ಲಿ ನಿವೃತ್ತರಾದರು. - ರೈಸ್ ಅವರು ಚಿಕ್ಕವಯಸ್ಸಿನಲ್ಲಿಯೇ ಈ ದೇಶದ ಹಲವು ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದು ಈ ದೇಶವನ್ನು ಇಲ್ಲಿನ ಜನಗಳನ್ನು ಚೆನ್ನಾಗಿ ಅರಿತವರಾಗಿದ್ದರು. ಶಾಲಾ ಇನ್ಲೈಕ್ಷರಾಗಿದ್ದಾಗಲೂ, ವಿದ್ಯಾ ಇಲಾಖೆಯ ಮುಖ್ಯಾಧಿಕಾರಿಯಾಗಿ ದ್ದಾಗಲೂ ಮಾಡಿದ ಪ್ರವಾಸಗಳಿಂದ ಇಲ್ಲಿನ ನಾನಾ ಭಾಗಗಳನ್ನು ಕಣ್ಣಾರೆ ಕಂಡು ಅವುಗಳ ಪರಿಚಯ ಮಾಡಿಕೊಂಡಿದ್ದರು. ಜೊತೆಗೆ ಅಲ್ಲಲ್ಲಿ ದೊರೆತ ಓಲೆಗರಿಗಳು, ಹಸ್ತ ಪ್ರತಿಗಳು, ಸ್ಥಳಪುರಾಣ, ಚರಿತ್ರೆಗಳನ್ನು ಕಲೆಹಾಕಿದ್ದರು, ಇದರಿಂದ ಅವರಿಗೆ ಸುಪ್ರಸಿದ್ದವಾದ ಮೈಸೂರು ಗೆಜೆಟಿಯರಿನ ಎರಡು ಸಂಪುಟಗಳನ್ನು ಬರೆಯಲು ಒಳ್ಳೆಯ ಸಾಧನ ಸಂಪತ್ತು ದೊರೆಯಿತು. ಈ ಸಂಪುಟಗಳನ್ನು 1877-78ರಲ್ಲಿ ಪ್ರಕಟಿಸಿದುದಲ್ಲದೆ ಮತ್ತೆ 1897ರಲ್ಲಿ ಪರಿಷ್ಕರಿಸಿದರು. 1881ರಲ್ಲಿ ನಡೆದ ಮೈಸೂರು ದೇಶದ ಮೊದಲನೆಯ ಜನಗಣತಿಯ ವರದಿಯನ್ನೂ ಇವರು ಸಿದ್ಧ ಪಡಿಸಿದರು. ಊರುಗಳ ಮುಂದೆ, ದೇವಾಲಯಗಳ ಬಳಿ ನಿಂತಿರುವ ಶಾಸನಗಳು ರೈಸ್ ಅವರ ಗಮನ ಸೆಳೆದುದು ಸ್ವಾಭಾವಿಕ. ಶಾಸನಗಳನ್ನು ಸ್ವಪ್ರಯತ್ನದಿಂದ ಓದಿ ಅವುಗಳಿಗೆ ಟಿಪ್ಪಣಿ ಬರೆಯುವ ಹವ್ಯಾಸ ಬೆಳೆಸಿಕೊಂಡರು. ಬರ್ಗೆಸ್ ಅವರು 1876ರಲ್ಲಿ ' ಇಂಡಿಯನ್ ಆಂಟಿಕ್ಯುಅರಿ ' ಎಂಬ ಪತ್ರಿಕೆಯನ್ನು ಆರಂಭಿಸಿದಾಗ ಅದರ ಮೊದಲ ಸಂಪುಟದಲ್ಲಿಯೇ ರೈಸ್ ಅವರು ಮಡಿಕೇರಿ ತಾಮ್ರಶಾಸನದ ಬಗ್ಗೆ ಲೇಖನವನ್ನು ಪ್ರಕಟಿಸಿದರು. 1879ರಲ್ಲಿ ಅವರ ಮೈಸೂರ್ ಇನ್‌ಸ್ಕಿಪ್ಷನ್ಸ್' ಎಂಬ ಗ್ರಂಥ ಪ್ರಕಟವಾಯಿತು. ಮೈಸೂರು ದೇಶದ ಬೇರೆ ಬೇರೆ ಭಾಗಗಳಲ್ಲಿ ದೊರೆತ ಹಲವು ಶಾಸನಗಳ ಇಂಗ್ಲಿಷ್ ಅನುವಾದಗಳನ್ನು ಅದರಲ್ಲಿ ಕೊಟ್ಟರು. ಪುರಾತತ್ವ ಇಲಾಖೆಯ ಅಧಿಕಾರವನ್ನು ವಹಿಸಿಕೊಂಡ ಕೂಡಲೇ ಎಪಿಗ್ರಾಫಿಯ ಕರ್ನಾಟಕ ಗ್ರಂಥಮಾಲೆ ಯನ್ನು ಆರಂಭಿಸಿ ಶಾಸನ ಸಂಪುಟಗಳನ್ನು ಪ್ರಕಟಿಸಲಾರಂಭಿಸಿದರು. 1886ರಲ್ಲಿ ಈ ಗ್ರಂಥಮಾಲೆಯ ಮೊದಲನೆಯ ಸಂಪುಟ - ಕೊಡಗಿನ ಶಾಸನಗಳು ' ಹೊರಬಂದಿತು. ಶ್ರವಣಬೆಳಗೊಳದಲ್ಲಿ ದೊರೆತ ಶಾಸನಗಳನ್ನು ಒಟ್ಟುಗೂಡಿಸಿ 1889ರಲ್ಲಿ ' ಶ್ರವಣಬೆಳಗೊಳದ ಶಾಸನಗಳು' ಎಂಬ ಎರಡನೇ ಸಂಪುಟವನ್ನು ರೈಸ್ ಅವರು ಪ್ರಕಟಿಸಿದರು. - 1890ರಲ್ಲಿ ಪೂರ್ಣಕಾಲದ ನಿರ್ದೇಶಕರಾಗಿ ಪುರಾತತ್ವ ಇಲಾಖೆಯ ಆಡಳಿತವನ್ನು ವಹಿಸಿಕೊಂಡಮೇಲೆ ಪ್ರಾಚ್ಯ ವಸ್ತುಗಳ ಅನ್ವೇಷಣಾ ಕಾರ್ಯವನ್ನು ಕ್ರಮಬದ್ಧವಾಗಿ ನಡೆಸಲು ರೈಸ್ ಅವರಿಗೆ ಅವಕಾಶ ದೊರೆಯಿತು. ಉತ್ಸಾಹ ಮತ್ತು ಕಾರ್ಯಶಕ್ತಿಗಳು ತುಂಬಿದ್ದ ಈ ಘನವಿದ್ವಾಂಸರು ದೇಶದ ಎಲ್ಲ ಭಾಗಗಳಲ್ಲಿಯೂ ಸುತ್ತಿ ಸಹಸ್ರಾರು ಶಾಸನಗಳನ್ನು ಸಂಗ್ರಹಿಸಿದರು. ಅವರು ಈ ಅಧಿಕಾರದಲ್ಲಿದ್ದ 16 ವರ್ಷಗಳಲ್ಲಿ ಎಪಿಗ್ರಾಫಿಯ ಕರ್ನಾಟಕದ ಉಳಿದ ಹತ್ತು ಬೃಹತ್ಸಂಪುಟಗಳನ್ನು ಪ್ರಕಟಿಸಿದರು. ಒಂದೊಂದು ಸಂಪುಟವೂ ಸಾಮಾನ್ಯವಾಗಿ ಒಂದೊಂದು ಜಿಲ್ಲೆಯಲ್ಲಿ ದೊರೆತ ಶಾಸನಗಳನ್ನೊಳಗೊಂಡಿವೆ. ಶಿವಮೊಗ್ಗ ಜಿಲ್ಲೆಯ ಶಾಸನಗಳು ಮಾತ್ರ ಎರಡು ಸಂಪುಟಗಳಲ್ಲಿವೆ. - ಈ ಹನ್ನೆರಡು ಸಂಪುಟಗಳಲ್ಲಿ ರೈಸ್ ಅವರು ಸಂಗ್ರಹಿಸಿ ಪ್ರಕಟಪಡಿಸಿರುವ ಶಾಸನಗಳ ಒಟ್ಟು ಸಂಖ್ಯೆ 8869, ಕರ್ನಾ ಟಕದ ಚರಿತ್ರೆಯನ್ನು ಅರಿಯುವುದಕ್ಕೆ ಈ ಶಾಸನಗಳಲ್ಲಿ ಅನೇಕವು ಅತ್ಯಮೂಲ್ಯವಾದುವು. ಈ ದೇಶದ ಚರಿತ್ರೆಯನ್ನು ಬರೆಯಲಂತೂ ಈ ಶಾಸನಗಳ ನೆರವು ಅತ್ಯಗತ್ಯ. ರೈಸ್ ಅವರು ಕಂಡುಹಿಡಿದ ಈ ಶಾಸನಗಳು ಕರ್ನಾಟಕದ ಚರಿತ್ರೆಯನ್ನು ಕ್ರಿ. ಪೂ. 3ನೇ ಶತಮಾನದಷ್ಟು ಹಿಂದಕ್ಕೆ ಒಯ್ದವು. ಈ ಎಲ್ಲ ಶಾಸನಗಳಿಂದ ತಿಳಿದುಬರುವ ರಾಜಕೀಯ ಚರಿತ್ರೆಯ ತಿರುಳನ್ನು ರೈಸ್ ಅವರು ಮೈಸೂರು ಅಂಡ್ ಕೂರ್ಗ್ ಫ್ರಮ್ ಇನ್‌ಸ್ಕ್ರಿಪ್ಷನ್ಸ್' ಎಂಬ ಗ್ರಂಥದಲ್ಲಿ ಒದಗಿಸಿದ್ದಾರೆ.