ಪುಟ:Hosa belaku.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

ತಿತ್ತು. ದಾರಿಯುದ್ದಕ್ಕೂ ನಡೆಯುತ್ತಿರುವಂತೆ ತಲೆತು೦ಬ ಯೋಚನೆಗಳೇ!

"ಗಂಡನ ಅಪಘಾತದ ನಂತರ ಅವರು ಕೂಡಿಸಿಟ್ಟ ನಿಧಿಯಿಂದ ಕಾಲೇಜು ಕಲಿತಳು. ಬಿ. ಎ. ಆಯಿತು; ಬಿ. ಟಿ. ಯೂ ಆಯಿತು. ಮನೆಯಲ್ಲಿ ಕೂಡಿಸಿದ ನಿಧಿಯ ತೀರಿತು. ಆದರೂ ಒಂದು ವೃತ್ತಿಗೆ ಮಾರ್ಗವಾಯಿತು. ಕೆಲಸವೂ ಸಿಕ್ಕಿತು. ಕೈತುಂಬ ಸಂಬಳವೂ ಸಿಗತೊಡಗಿತು. ಇದೆಲ್ಲ ಮಾಡಿದ್ದು ಯಾರು ? ಅವರು ! ಹೌದು ಮಾಡಿದರೇನಾಯಿತು? ಅವರು ತನಗೆ ಕಲಿಸಿದರೇನಾಯಿತು ? ತಾವು ಇನ್ನು ದುಡಿದು ತರುವುದು ಸಾಧ್ಯವಿಲ್ಲವೆಂದು ಮನದಟ್ಟಾದ ಮೇಲೆಯೇ ತನಗೆ ಕಲಿಸಿದ್ದಾರೆ. ಇದರಲ್ಲಿ ಯಾವ ಪಾರಮಾರ್ಥ ? ಪಾರಮಾರ್ಥ ಇಲ್ಲವೇ ಇಲ್ಲ ! ಸ್ವಾರ್ಥವೇ ತುಂಬಿದೆ ! ತಮ್ಮ ಹೊಟ್ಟೆ ಪಾಡಿಗಾಗಿ ಈ ಪಾರಮಾರ್ಥದ ಸೋಗನ್ನು ಧರಿಸಿದ್ದಾರೆ - ನಾನು ಈ ಸೋಗಿಗೆ ಮರುಳಾಗಿ, ಈ ಕುಂಟ ವ್ಯಕ್ತಿಯನ್ನು ಆಮರಣ ಸಾಕಲೇ ? ಅದರಿಂದ ತನಗಾವ ಸುಖ ? ಸುಖ ಒಂದೇ. ಅ೦ಗಹೀನ ಗಂಡನ ದರ್ಶನ--ಆ ವಿಕೃತ ಮುಖದ ದರ್ಶನ."

ಲೀಲಾಬಾಯಿಯವರು ಇನ್ನೂ ವಿಚಾರಿಸುತ್ತಲೇ ಇದ್ದರು. ಆದರೆ ಬದಿಯಲ್ಲಿ ಕಾರು ಬಂದು ನಿಂತಿತು ಒಳಗಿನಿಂದಲೇ ಕಾರಿನ ಡ್ರಯವ್ಹರ್ ಕೂಗಿ ಹೇಳಿದ:

"ಬಾಯಿಯವರೇ, ಒಂದು ಬದಿಯಿಂದ ಹೋಗಿರಿ, ರಸ್ತೆಯ ನಡುವೇ ಹೊಂಟೀರಲ್ಲ!"

ಲೀಲಾಬಾಯಿಯವರಿಗೆ ಆಗಲೇ ಎಚ್ಚರುಬಂದದ್ದು. ಮುಖ ಮೇಲಕ್ಕೆತ್ತಿ ನೋಡಿದರು. ಕಾರಿನಲ್ಲಿ ಕುಳಿತು ಒಂದು ಜೊತೆ ವಾಯುವಿಹಾರಕ್ಕೆ ಹೊರಟಿತ್ತು. ಕೈಗೆ ಕೈ, ಮೈಗೆ ಮೈ ಅಂಟಿಸಿಕೊಂಡು ಕುಳಿತ ಆ ದೃಶ್ಯವನ್ನು

ಲೀಲಾಬಾಯಿಯವರಿಂದ ನೋಡಲಾಗಲಿಲ್ಲ. ಅವರ ಹೊಟ್ಟೆಯಲ್ಲಿ ಕರಳು ಕಿತ್ತು ಬಂದಂತಾಯಿತು. ಲೀಲಾಬಾಯಿ, ದಾರಿಯ ಒಂದು ಬದಿಗೇನೋ ಸರಿದರು; ಆದರೆ ಮನಸ್ಸು ದಂಪತಿಗಳತ್ತಲೇ ಇತ್ತು. ಅವರ ಒಳಗಿನ ಹಸಿವು ಪ್ರಜ್ವಲಿತವಾಗತೊಡಗಿತು, ಆದರೆ ಊಟ ಉಣ್ಣುವವನ ತಟ್ಟೆಯತ್ತ ನೋಡಿದರೆ, ಹಸಿವು ಹಿಂಗಬಹುದೇ?