ಪುಟ:Hosa belaku.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮತಾಂತರ.

ನಾನು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ ದಿನದಿಂದ ಇಂದಿನವರೆಗೆ ಸೋಲಿನ ಅನುಭವವೇ ಬಂದಿರಲಿಲ್ಲ. ಆದರೆ ಇಂದು ಮಾತ್ರ ಸೋಲು ಬರಬಹುದೆಂಬ ಚಿನ್ಹ ಕಾಣತೊಡಗಿತ್ತು. ಕೊನೆಯವರೆಗೆ ಅಜಿಂಕ್ಯನೆನಿಸಿಕೊಳ್ಳುವದು ಕಷ್ಟ ಸಾಧ್ಯವಾದ ಮಾತೇ ಸರಿ.

ಅಂದು ಕೋರ್ಟಿನಲ್ಲಿ ಹೆಚ್ಚು ಕಾಲ ನಿಲ್ಲುವದಕ್ಕೆ ಮನಸ್ಸೇ ಆಗಲಿಲ್ಲ. ಬಾರ್ ರೂಮ್, ಬ್ರಿಜ್ ಮುಂತಾದವುಗಳ ಗೊಂದಲಕ್ಕೆ ಬೀಳದೇ ನೇರವಾಗಿ ಮನೆಯ ಹಾದಿಯನ್ನು ಹಿಡಿದೆ. ಮನೆಗೆ ಬಂದಾಕ್ಷಣವೇ, ನನ್ನವಳು ಸಿಡಿಮಿಡಿಗೊಂಡದ್ದನ್ನು ಗಮನಿಸಿದೆ. ಮೊದಲೇ ನನ್ನ ಮನಸ್ಸು ಅಸ್ಯವ್ಯಸ್ತವಾಗಿತ್ತು. ಅದರ ಕಾರಣದಿಂದಲೋ ಏನೋ? ಹೆಂಡತಿಯ ಕೋಪಮುದ್ರೆಯತ್ತ ಸ್ವಲ್ಪ ಉದಾಸೀನತೆಯನ್ನು ತೋರಿಸುತ್ತಲೇ ಆರಾಮ ಖುರ್ಚಿಯಲ್ಲಿ ಒರಗಿದೆ. ಬದಿಯ ಕೋಣೆಯಲ್ಲಿಯೇ ನನ್ನ ಭಾವ ಅಭ್ಯಾಸ ನಡೆಸಿದ್ದ. ಅವನು ಓದುತ್ತಿದ್ದ ಪದ್ಯದ ಕೆಲ ಸಾಲುಗಳು ನನಗೆ ಕೇಳಿಸತೊಡಗಿದವು.

"ಗುಣವಂತರ್ ಪಾಲುಂಡು ಮೇಲು೦ಬರೇ?
ರಂಭಾ ನೃತ್ಯದಿ ಡೊಂಬರೇ..."

ಪರೀಕ್ಷೆಯಲ್ಲಿ ನಾಪಾಸಾದ ವಿದ್ಯಾರ್ಥಿಗೆ ಮತ್ತೆ ಮತ್ತೆ ಅವನನ್ನು ಅದಕ್ಕಾಗಿ ಹೀಯಾಳಿಸಿದರೆ, ಅವನು ತಾನು ಅನುತ್ತೀರ್ಣನಾದ ದುಃಖವನ್ನು ಮರೆತು, ತನ್ನನ್ನು ಹೀಯಾಳಿಸುವವರ ಮೇಲೆ ಹರಿಹಾಯುತ್ತಾನೆ. ಹಾಗೇ, ನನ್ನ ಭಾವನ ಬಾಯಿಂದ ಬಂದ ಸೋಮೇಶ್ವರ ಶತಕದ ವೇದ ವಾಕ್ಯಗಳು ನನ್ನ ಉದ್ವಿಗ್ನ ಮನಸ್ಸನ್ನು ಕೆರಳಿಸಿತು. ಒಂದು ಗುಡುಗನ್ನು ಹಾಕಿ ಅವನನ್ನು ಬೇರೆ ರೂಮಿಗೆ ಅಟ್ಟಿದೆ. ಸಧ್ಯ ಅವನನ್ನು ಹೊರದೂಡಿದರೂ ಅವೇ