ಪುಟ:Hosa belaku.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ii

ಕಣ್ಣಾರೆ ಕಂಡ-ಕಿವಿಗಳಿಂದ ಕೇಳಿದ-ವಾಸ್ತವ ಸಂಗತಿಗಳಿಂದಲೇ ವಸ್ತುಗಳನ್ನು ಆಯ್ದು ಕೊಳ್ಳುವವರು. ಆ ವಸ್ತುವಿಗೆ ತಕ್ಕ ಪಾತ್ರಗಳನ್ನು ಸೃಷ್ಟಿಸಿ ಆ ಪಾತ್ರಗಳ ಸ್ವಭಾವ ವೈಶಿಷ್ಟವು ಆ ಮುಖ್ಯ ಘಟನೆಗೆ ಹೇಗೆ ಕಾರಣವಾದು ಎಂಬುದನ್ನು ಹೇಳಲು ಹವಣಿಸುವವರು, ಈ ಸಂಗ್ರಹದಲ್ಲಿಯ ಒಂಬತ್ತು ಕತೆಗಳಲ್ಲಿಯೂ ಕಂಡುಬರುವ ಮುಖ್ಯ ಘಟನೆಗಳು ಬಹಳ ಜನರಿಗೆ ಕಂಡು ಕೇಳಿದ ಘಟನೆಗಳಾಗಿ ತೋರಬಹುದು. ಎಂತಲೇ ಈ ಕತೆಗಳಲ್ಲಿ ಬರುವ ಪಾತ್ರಗಳನ್ನು ವಾಸ್ತವ ವ್ಯಕ್ತಿಗಳಿಗೆ ಹೋಲಿಸಿ ನೋಡುವ ತವಕವೂ ಉಂಟಾಗಬಹುದು. ಇದೊಂದು ವಾಸ್ತವ ಮಾರ್ಗದ ಸಾಹಿತ್ಯದ ವೈಲಕ್ಷಣ್ಯ. ಆದುದರಿಂದಲೆ ವಾಚಕರು ಇವನ್ನೆಲ್ಲ ಕತೆಗಳೆಂದು ಓದಬೇಕೇ ಹೊರತು ನಡೆದ ಸಂಗತಿಯ ಸತ್ಯ ಸ್ಥಿತಿಯೆಂದು ತಿಳಿಯಲಾಗದು.

ಇಂದು ಪ್ರಪಂಚದ ಯಾವ ಭಾಷೆಯ ಸಾಹಿತ್ಯದಲ್ಲಿಯೂ ಸಾಮಾಜಿಕ ಪ್ರಜ್ಞೆಗೆ ಪ್ರಮುಖವಾದ ಸ್ಥಾನವನ್ನು ಕೊಡಲಾಗುತ್ತಿದೆ. ವಿಜ್ಞಾನದ ಪ್ರಗತಿಯು ಇಂದು ಎಲ್ಲ ದೇಶಗಳಲ್ಲಿಯೂ ಹಳೆಯ ಸಾಮಾಜಿಕ ಕಟ್ಟು-ಕಟ್ಟಳೆಗಳನ್ನು ಸಡಲಿಸಿ ಬಿಟ್ಟುದರಿಂದ, ಎಲ್ಲ ದೇಶಗಳಲ್ಲಿಯೂ ಒಂದಿಲ್ಲೊಂದು ಬಗೆಯಾಗಿ ಸಾಮಾಜಿಕ ವೈಷಮ್ಯ-ಅಶಾಂತಿಗಳು ತಾಂಡವವಾಡುತ್ತಲಿವೆಯೆಂಬುದನ್ನು ಬೇರೆಯಾಗಿ ಹೇಳಬೇಕಾಗಿಯೇ ಇಲ್ಲ. ಆದುದರಿಂದಲೇ ಎಲ್ಲದೇಶದ ಸಾಹಿತ್ಯಕರೂ ಇಂದು ಸಮಾಜದ ಸಮತೆ-ಶಾಂತಿಗಳಿಗಾಗಿ ಪ್ರಚಾರವನ್ನು ತಮ್ಮ ಸಾಹಿತ್ಯ ನಿರ್ಮಿತಿಯ ಮೂಲಕ ನಡೆಯಿಸಿದ್ದಾರೆ. ಸಮತೆ-ಶಾಂತಿಗಳಿದ್ದಾಗ ಸಾಹಿತ್ಯ ಸೌಂದರ್ಯ ಸಿದ್ಧಿ-ಸೌಂದರ್ಯದರ್ಶನಗಳ ಕಾರ್ಯ ಮಾಡುವುದು; ವೈಷಮ್ಯ-ಅಶಾಂತಿಗಳಿದ್ದಲ್ಲಿ ವ್ಯಕ್ತಿಧರ್ಮ-ಸಮೂಹ ಧರ್ಮಗಳ ಪ್ರಚಾರ ಕಾರ್ಯ ಮಾಡಬೇಕಾಗುವುದು. ಆಧುನಿಕ ಕನ್ನಡ ಸಾಹಿತ್ಯವೂ ಈ ಜಾಗತಿಕ ಚಟುವಟಿಕೆಯಲ್ಲೇ ಭಾಗವಹಿಸಿದೆಯೆಂದು ಹೇಳಿದರೆ ಇದನ್ನು ಯಾರೂ ಒಪ್ಪಿಕೊಳ್ಳದಿರಲಾರರು. ಶ್ರೀ. ಜೋಶಿಯವರೂ ತರುಣ ಕನ್ನಡ ಕತೆಗಾರರು. ಅವರ ಮನಸ್ಸು-ಬುದ್ಧಿಗಳನ್ನು ಕೆರಳಿಸಿದುದು ಇಂದಿನ ಸಾಮಾಜಿಕ ಪರಿಸ್ಥಿತಿಯ ಪ್ರಭಾವವೇ ಎಂಬುದನ್ನು ಇಲ್ಲಿಯ ಪ್ರತಿಯೊಂದು ಕತೆಯಲ್ಲಿಯೂ ನೋಡಬಹುದು.

ಇಂದು ಸಮಾಜದ ವೈಷಮ್ಯಕ್ಕೆ ಕಾರಣವಾದುವೆಂದರೆ ಹೆಣ್ಣು ಗಂಡಿನ