ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೮
ಕದಳಿಯ ಕರ್ಪೂರ


ಲತಾಗೃಹಗಳ ಬಳಿಗೆ ಕರೆದೊಯ್ದು ವರ್ಣಿಸಿದಳು.

ಉದ್ಯಾನವನದ ಮಧ್ಯದಲ್ಲಿರುವ ಸುಂದರವಾದ ಸರೋವರವಂತೂ ಮಹಾದೇವಿಯ ಮನಸ್ಸನ್ನು ಸೆರೆಹಿಡಿಯಿತು. ಅದಕ್ಕೆ ನಾಲ್ಕು ಕಡೆಯಿಂದಲೂ ಇಳಿಯುವುದಕ್ಕೆ ಮೆಟ್ಟಲುಗಳು. ಶುಭ್ರವಾದ ತಿಳಿನೀರು ಸೂರ್ಯನ ಕಿರಣಗಳನ್ನು ಧರಿಸಿ ಹೊಳೆಯುತ್ತಿತ್ತು. ಸಾರಸಪಕ್ಷಿಗಳು ತಮ್ಮ ಅಚ್ಚಬಿಳಿಯ ಬಣ್ಣದ ದೇಹವನ್ನು ಬೀಸಾಡುತ್ತಾ ಈಜಾಡುತ್ತಿದ್ದವು. ಉದ್ಯಾನದ ಸೌಂದರ್ಯವನ್ನು ಪ್ರತಿಬಿಂಬಿಸುವ ಜಲದರ್ಪಣದಂತಿತ್ತು ಆ ಸರೋವರ.

ಅಲ್ಲಿ ಸ್ವಲ್ಪ ಕಾಲ ಕುಳಿತುಕೊಂಡಳು ಮಹಾದೇವಿ. ಸುತ್ತಲೂ ನೋಡಿದಳು. ಆವುದೋ ಸೌಂದರ್ಯ ಲೋಕದಲ್ಲಿರುವಂತೆ ಅನಿಸಿತು ಅವಳಿಗೆ. ಆದರೆ ಅನತಿ ದೂರದಲ್ಲಿ ತಲೆಯೆತ್ತಿ ನಿಂತಿದ್ದ ಕೌಶಿಕನ ಅರಮನೆ ಈ ಜಗತ್ತಿನ ನೆನಪನ್ನು ತಂದುಕೊಟ್ಟಿತು. ಅವಳ ಮನಸ್ಸು ಸೌಂದರ್ಯಲೋಕದಿಂದ ತನ್ನ ಸಮಸ್ಯೆಯ ಲೋಕಕ್ಕೆ ಇಳಿಯಿತು ; ಕ್ಷಣಕಾಲ ರಸಸಮಾಧಿಯಲ್ಲಿದ್ದ ಸಾಧಕರ ಮನಸ್ಸು ಮತ್ತೆ ಲೌಕಿಕಕ್ಕೆ ಮರಳುವಂತೆ.

ಯಾರು ಈ ಸೌಂದರ್ಯದ ಆನಂದವನ್ನು ತನಗೆ ಕೊಡಲು ಕಾರಣರಾಗಿದ್ದಾರೋ, ಅವರೇ, ತನಗೆ ಈ ಸಮಸ್ಯೆಯ ಸಂಕಟವನ್ನು ಸುತ್ತುವುದಕ್ಕೂ ಕಾರಣರೆಂಬುದನ್ನು ನೆನೆದ ಮಹಾದೇವಿಗೆ, ಇದೇ ಜೀವನದ ರಹಸ್ಯವೇನೋ ಎಂದೆನ್ನಿಸಿತು. ಯಾವುದು ದುಃಖಕ್ಕೆ ಕಾರಣವೋ ಅದರ ಗರ್ಭದಲ್ಲಿಯೇ ಸುಖ ಅಡಗಿರುತ್ತದೆ. ಯಾವುದು ಈಗ ಸುಖಪ್ರದವೋ ಅದೇ ಮುಂದೆ ದುಃಖಕ್ಕೆ ನಾಂದಿಯೂ ಆಗಬಲ್ಲುದು. ಸಾಮಾನ್ಯ ಮರ್ತ್ಯಮಟ್ಟದ ವ್ಯವಹಾರದಲ್ಲಿ ಈ ಸುಖ ದುಃಖಗಳ ಪರಂಪರೆ ಅನಿವಾರ್ಯವೆಂದೆನಿಸಿತು.

ತನ್ನ ಜೀವನದ ಇಂದಿನ ಈ ಘಟನೆಗೆ ಕಾರಣವಾದ ಕೌಶಿಕನ ಚಿತ್ರ ಅವಳೆದುರು ಸುಳಿಯಿತು. ಕ್ಷಣಕಾಲ ಆಲೋಚನೆಯಲ್ಲಿ ಮಗ್ನವಾಯಿತು ಅವಳ ಮನಸ್ಸು. ಅನಂತರ ಕೇಳಿದಳು ರಸವಂತಿಯನ್ನು :

``ರಸವಂತಿ, ಒಂದು ಮಾತು ಕೇಳುತ್ತೇನೆ. ನಿಜ ಹೇಳುತ್ತೀಯಾ?

``ಕೇಳಿ ಒಡತಿ.

``ಆ ಮಾತನ್ನು ಬಿಡು, ನೀನು ನನ್ನ ಗೆಳತಿ, ಬಾ ಹತ್ತಿರಕ್ಕೆ ಎಂದು ಕೈಹಿಡಿದು ಅವಳನ್ನು ಹತ್ತಿರಕ್ಕೆ ಎಳೆದುಕೊಂಡಳು. ರಸವಂತಿ ಸ್ವಲ್ಪ ಸಂಕೋಚದಿಂದಲೇ ಹತ್ತಿರಕ್ಕೆ ಬಂದರೂ ಕ್ರಮೇಣ ಅವಳ ಸಂಕೋಚ ಮರೆಯಾಯಿತು. ಮಹಾದೇವಿಯ ವಾತ್ಸಲ್ಯಕ್ಕೆ ಅವಳ ಮನಸ್ಸು ಮಾರುಹೋಗಿತ್ತು.