ಪುಟ:Kadaliya Karpoora.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬರೆ

೧೨೫

``ನಿನ್ನ ಮನಸ್ಸು ಏನನ್ನಾದರೂ ಭಾವಿಸಿರಬಹುದು.... ಆದರೆ... ನಾನು ಹೇಳಿದ ಮಾತುಗಳು ನೆನಪಿನಲ್ಲಿಲ್ಲವೇ ?

``ಇವೆ. ಆದರೆ... ಮಹಾದೇವಿ... ನನ್ನನ್ನು ಏಕಿಷ್ಟು ಗೋಳಾಡಿಸುತ್ತಿದ್ದೀಯ? ನಿನ್ನ ಅಪೂರ್ವವಾದ ಸೌಂದರ್ಯದಿಂದ ನನ್ನನ್ನು ಹುಚ್ಚನನ್ನಾಗಿ ಮಾಡಿ ಅದರ ಆಟವನ್ನು ನೋಡುತ್ತಿದ್ದೀಯ ? ನನ್ನ ಮೇಲೆ ಇಷ್ಟೊಂದು ಕಠಿಣಳಾಗಬೇಡ, ಬೇಡಿಕೊಳ್ಳುತ್ತೇನೆ. ನಿನ್ನ ಪ್ರೇಮವನ್ನು ನೀಡು - ದೈನ್ಯದಿಂದ ಬೇಡಿದ ಕೌಶಿಕ. ಮಹಾದೇವಿಯ ಆವೇಶವೂ ಸ್ವಲ್ಪ ಇಳಿದಿತ್ತು. ಹೇಳಿದಳು :

ನೀವು ಬೇಡುತ್ತಿರುವುದು ನನ್ನ ಪ್ರೇಮವಲ್ಲ ; ನನ್ನ ದೇಹವನ್ನು. ಈ ದೇಹದ ಸೌಂದರ್ಯವೆಂಬ ಭ್ರಮೆಯಿಂದ ಇಷ್ಟೊಂದು ಮರುಳಾಗುವುದುಂಟೇ? ಏನಿದೆ ಈ ದೇಹದಲ್ಲಿ

ಕಣ್ಣು ತೆರೆದು ನೋಡು

ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ,

ಎಲುವಿನ ತಡಿಕೆ, ಕೀವಿನ ಹಡಿಕೆ

ಸುಡಲೀ ದೇಹವ ; ಒಡಲುವಿಡಿದು ಕೆಡದಿರು,

ಚೆನ್ನಮಲ್ಲಿಕಾರ್ಜುನನರಿ ಮರುಳೇ.

ಅವಾಕ್ಕಾಗಿ ನಿಂತ ಕೌಶಿಕ ಮತ್ತೆ ಹೇಳಿದ :

``ನಿನ್ನಂತಹ ಸುಂದರ ತರುಣಿ, ಇಂತಹ ಶುಷ್ಕತತ್ವಗಳನ್ನು ಹೇಳುವುದೇ? ಸೃಷ್ಟಿಕರ್ತನ ಅಪಾರವಾದ ಸೌಂದರ್ಯದ ರಾಶಿಯನ್ನು ಪಡೆದಿರುವ ನಿನ್ನಲ್ಲಿ ಆ ಸೌಂದರ್ಯದ ದೃಷ್ಟಿಯನ್ನು ಮೆಚ್ಚುವ ರಸಿಕತೆಯಿಲ್ಲವೇ ? ನಿನ್ನ ಸೌಂದರ್ಯದ ಉಪಾಸಕ ನಾನು, ಆರಾಧಕ ನಾನು.

``ಹೀಗೆಯೇ ಜನ ದೊಡ್ಡ ದೊಡ್ಡ ಮಾತುಗಳನ್ನಾಡಿ, ತಮ್ಮನ್ನು ತಾವು ವಂಚಿಸಿಕೊಳ್ಳುವುದು. ನಿಜವಾದ ಸೌಂದರ್ಯೋಪಾಸನೆ ಸ್ವಾರ್ಥರಹಿಸತವಾದದ್ದು. ಆದರೆ ನಿನ್ನದು ಸ್ವಾರ್ಥಮೂಲವಾದದ್ದು. ಕ್ಷುದ್ರಸುಖವನ್ನು ಬಯಸಿದುದು. ಅದು ಉಪಾಸನೆಯಲ್ಲ, ಆರಾಧನೆಯಲ್ಲ, ಕಾಮವಾಸನೆ.

``ಸ್ವಾರ್ಥಮೂಲವಾಗಿಯೂ ನಿಃಸ್ವಾರ್ಥಕ್ಕೆ ಏರಬಹುದಲ್ಲವೇ, ಮಹಾದೇವಿ ? ದೈಹಿಕ ಆಕರ್ಷಣೆ ಮೊದಲನೆ ಮೆಟ್ಟಲು. ಅಲ್ಲಿಂದ ಹೊರಟ ನಮ್ಮ ಪ್ರೇಮ ಉದಾತ್ತವಾದುದಾಗಲಿ ; ವಿಶ್ವವ್ಯಾಪಕವಾದುದಾಗಲಿ. ನಾನು ಕಂಡ ಕಂಡ ಸ್ತ್ರೀಯರನ್ನು ಬಯಸುವ ಕಾಮುಕನಲ್ಲ. ನನ್ನ ಪ್ರೇಮವೆಲ್ಲಾ ನಿನ್ನಲ್ಲಿ ನಾಟಿದೆ. ಎಲ್ಲವನ್ನೂ ನಿನಗೇ ಧಾರೆಯೆರೆದಿದ್ದೇನೆ.