ಪುಟ:Kadaliya Karpoora.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪

ಕದಳಿಯ ಕರ್ಪೂರ

``ಏನೂ ಯೋಚಿಸಬೇಡ ತಾಯಿ. ಎಲ್ಲಾ ಶುಭವಾಗುವುದು. ನಮ್ಮ ಮನಸ್ಸನ್ನು ಇದು ಅಣುಮಾತ್ರವೂ ಕಲಕಿಲ್ಲ. ನಿನ್ನ ಭಕ್ತಿಯ ಉಪಚಾರದ ಸವಿನೆನಪು ಮಾತ್ರ ಉಳಿದಿದೆ. ಮಹಾರಾಜ, ಆ ಪುಣ್ಯದಲ್ಲಿ ನಿನಗೂ ಪಾಲಿದೆ. ನಿನಗೆ ಒಳ್ಳೆಯದಾಗಲಿ ಎಂದು ಸಂಗಮದೇವರು ಮುಂದೆ ಹೊರಟರು. ಉಳಿದ ಜಂಗಮರು ಹಿಂಬಾಲಿಸಿದರು. ಮಹಾದೇವಿ ಹೊರಬಾಗಿಲಿನವರೆಗೂ ಹೋಗಿ ಅವರನ್ನು ಕಳುಹಿಸಿ, ಬೀಳ್ಕೊಂಡು ಬಂದಳು.

ಕೌಶಿಕ ಇನ್ನೂ ಅಲ್ಲಿಯೇ ನಿಂತಿದ್ದ ಮರವಟ್ಟವನಂತೆ. ಮಹಾದೇವಿ ಒಳಗೆ ಬರುತ್ತಾ :

``ಮಹಾರಾಜ, ನಿನ್ನ ಅಪರಾಧಗಳಲ್ಲಿ ಎರಡನೆಯದು ಮುಗಿಯಿತು. ನನ್ನ ಭಕ್ತಿಸಾಧನೆಗೆ ಅಡ್ಡಿ ಬರಬಾರದೆಂಬ ನಿಯಮವನ್ನು ಇಷ್ಟು ಸುಲಭವಾಗಿ ನೀನು ಮರೆಯುತ್ತೀಯೆಂದು ಭಾವಿಸಿರಲಿಲ್ಲ. ಜಂಗಮರನ್ನು ಹೀಗೆ ಅಪಮಾನಗೊಳಿಸುತ್ತೀಯೆಂದು ತಿಳಿದಿರಲಿಲ್ಲ ಎಂದು ಅವನ ಯಾವ ಉತ್ತರಕ್ಕೂ ಕಾಯದೆ ಹೊರಟುಹೋದಳು. ತಾನು ಮಾಡಿದುದು ಅಚಾತುರ್ಯವಾಯಿತೆಂದು ಈಗ ಕೌಶಿಕನಿಗೆ ಅನಿಸಿತು.

ಬೆಳಗಿನಿಂದಲೂ ಅವಳಲ್ಲಿ ಕಂಡ ಉತ್ಸಾಹವನ್ನು ತಪ್ಪಾಗಿ ಭಾವಿಸಿ, ಮಹಾದೇವಿ ತನ್ನ ಮೇಲೆ ಪ್ರಸನ್ನಳಾಗಿದ್ದಳೆಂಬ ಕನಸನ್ನು ಕಟ್ಟಿದ್ದ ಕೌಶಿಕ. ಅದೇ ಭ್ರಮೆಯಲ್ಲಿಯೇ ದಿನ ಉರುಳುವುದು ಕಾಯುತ್ತಿದ್ದ. ಸಂಜೆಯಾಯಿತು. ಸಂಜೆ ಕಳೆಯಿತು, ಕತ್ತಲಾಯಿತು, ರಾತ್ರಿಯಾಯಿತು. ಇನ್ನೂ ಜಂಗಮರು ಹೊರಡುವ ಸೂಚನೆಯೇ ಕಂಡುಬರಲಿಲ್ಲ. ಇವನಿಗೋ ಮಹಾದೇವಿಯನ್ನು ಕಾಣುವ ಆತುರ, ಒಂದೇ ಸಮನೆ ಉಕ್ಕೇರುತ್ತಿತ್ತು. ಅದೇನು ಬಂದಿತೋ ಆವೇಶ ಹಿಂದೆ ಮುಂದೆ ನೋಡದೆ ನುಗ್ಗಿ ಬಿಟ್ಟ ಜಂಗಮರ ಬಳಿಗೆ.

ಈಗ ಅನಿಸಿತು ಕೌಶಿಕನಿಗೆ ತಾನು ಹಾಗೆ ಮಾಡಿದುದು ಅನುಚಿತವಾಯಿತೆಂದು. ಆದರೆ ಕಾರ್ಯ ಮಿಂಚಿಹೋಗಿತ್ತು. ಇನ್ನೊಂದು ತಪ್ಪು ಘಟಿಸಿತ್ತು.

ಮಹಾದೇವಿ ಇನ್ನೂ ತನ್ನ ತಪ್ಪುಗಳನ್ನು ಎಣಿಸುತ್ತಿದ್ದಾಳೆಂಬುದನ್ನು ನೆನೆದಾಗ ಅವನ ಕನಸಿನ ಗೋಪುರ ಸಿಡಿದೊಡೆದುಹೋಯಿತು.

`ಬೆಳಿಗ್ಗೆ ಹುಡುಕಿಕೊಂಡು ತಾನೇ ಬಂದಳು. ಎಷ್ಟು ಉತ್ಸಾಹದಿಂದ ಮಾತನಾಡಿದಳು : ಇನ್ನೇನು ನನ್ನ ಇಷ್ಟ ನೆರವೇರಿತೆಂದೇ ತಿಳಿದಿದ್ದೆ. ಆದರೆ ಅದೆಲ್ಲಾ ಬರಿಯ ತೋರಿಕೆಯದೇ ! ಛೇ, ಇನ್ನು ಸ್ವಲ್ಪ ಕಾಯದೆ ಎಂತಹ