ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಪೋಯಾತ್ರೆ
೧೭೫


ಅನಿರೀಕ್ಷಿತವಾಗಿ ಬಂದ ವಿಪತ್ತಿನ ಹಿಂದೆ, ಅಷ್ಟೇ ಅನಿರೀಕ್ಷಿತವಾಗಿ ಬಂದ ಸಹಾಯಹಸ್ತವನ್ನು ಕಂಡು ಮಹಾದೇವಿ ಬೆರಗಾಗಿ ನಿಂತಿದ್ದಳು.

ಕೊನೆಗೆ ಹೇಳಿದಳು : ``ತಮ್ಮ ಉಪಕಾರಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ, ಸ್ವಾಮಿ. ತಾವು ಬಂದು ನನ್ನನ್ನು ಕಾಪಾಡಿದಿರಿ.

``ಇಲ್ಲ ಮಗಳೇ. ನಿನ್ನ ಸತೀಶಕ್ತಿಯೇ ನಿನ್ನನ್ನು ಕಾಪಾಡುತ್ತಿತ್ತು. ಅದಕ್ಕೆ ನಾನು ನೆಪಮಾತ್ರವಾದೆ, ಮಹಾದೇವಿ.

ಬಂದವರ ಧ್ವನಿಯಿಂದ ಮತ್ತು ಅವರು ತನ್ನನ್ನು ಗುರುತು ಕರೆದ ರೀತಿಯಿಂದ, ಮಹಾದೇವಿಯ ಮೈ ರೋಮಾಂಚನಗೊಂಡಿತು.

``ಆಂ !! ತಾವು...

``ಹೌದು... ನಾನು ಮೊನ್ನೆಯ ದಿನ ಅರಮನೆಯಲ್ಲಿ ನಿನ್ನಿಂದ ಉಪಚಾರವನ್ನು ಪಡೆದ ಜಂಗಮ.... ಸಂಗಮದೇವರು.

ಮಹಾದೇವಿಗೆ ಸಂತೋಷವೋ, ದುಃಖವೋ, ಉದ್ವೇಗವೋ ಯಾವುದೂ ಅರಿಯದ ಭಾವನೆ ಉಕ್ಕಿಬಂದಿತು.

``ಸ್ವಾಮಿ, ಸಾಕ್ಷಾತ್ ಸಂಗಮದೇವರೇ ಬಂದಂತಾಯಿತು... ಎಂದು ಅವರ ಕಾಲಮೇಲೆ ಕುಸಿದುಬಿದ್ದಳು. ಅವರು ಆಕೆಯನ್ನು ಮೇಲೆತ್ತಿದರು. ಕಣ್ಣಿಂದ ನೀರು ಸುರಿಯುತ್ತಿರುವುದನ್ನು ಆ ಮೊಬ್ಬು ಬೆಳಕಿನಲ್ಲಿಯೂ ಗಮನಿಸಿದರು. ಅವಳ ತಲೆಯನ್ನು ನೇವರಿಸುತ್ತಾ :

``ದುಃಖಿಸಬೇಡ, ಮಗಳೇ. ಪ್ರಪಂಚದ ಕಟುವಾದ ಅನುಭವವನ್ನು ಪಡೆಯುವುದಕ್ಕಾಗಿಯೇ ಹೊರಬಿದ್ದಿರುವ ನೀನು ಇದನ್ನೆಲ್ಲಾ ಎದುರಿಸ ಬೇಕಾಗುತ್ತದೆ.

``ಹೀಗೂ ಉಂಟೇ, ಗುರುಗಳೇ ? ಹಾಕಿರುವ ವೇಷಕ್ಕೂ ಆಚರಿಸುವ ವರ್ತನೆಗೂ ಸಂಬಂಧವೇ ಬೇಡವೇ ?

``ಪ್ರಪಂಚ ನೀನು ತಿಳಿದಿರವಷ್ಟು ಸರಳವಾಗಿಲ್ಲಮ್ಮ. ಇದೊಂದು ಅನೇಕ ವೈಪರೀತ್ಯಗಳ ವಿಷಮಸಂಗಮ. ಒಂದು ಕಡೆಯಲ್ಲಿ ಮಾನವತೆ ಏರಬಹುದಾದ ಔನ್ನತ್ಯವನ್ನು ಕಂಡು ವಿಸ್ಮಯಮೂಕರಾಗುತ್ತೇವೆ. ಇನ್ನೊಂದು ಕಡೆಯಲ್ಲಿ ಅದು ನಮ್ಮ ಊಹೆಗೂ ನಿಲುಕಲಾರದಷ್ಟು ಕ್ಷುದ್ರತೆಯ ಪಾತಾಳಕ್ಕೆ ಇಳಿಯುವುದನ್ನು ಕಂಡು ವೇದನೆಗೊಳ್ಳುತ್ತೇವೆ. ಇದು ಅಂತಹ ಒಂದು ಘಟನೆಯೆಂದು ಭಾವಿಸಿ ಧೈರ್ಯವನ್ನು ತಾಳು. ನಿನ್ನ ನಿಷ್ಠೆಯೇ ನಿನ್ನನ್ನು ಕಾಯುತ್ತದೆ. - ಹೇಳಿದರು ಸಂಗಮದೇವರು.