ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೨
ಕದಳಿಯ ಕರ್ಪೂರ


ಮರಣವನ್ನು ಕಂಡು ಮರುಗುವ ತಂದೆಯ ಹೃದಯವೇ, ಮೀನಿನ ನೋವನ್ನು ಕಾಣುವಲ್ಲಿಯೂ ಇರಬಾರದಾಗಿತ್ತೇ ಎನ್ನಿಸಿತು.

``ಎಂತಹ ಸೂಕ್ಷ್ಮವಾದ ಆಲೋಚನೆ, ಮಹಾದೇವಿ. ಆದರೆ ಈ ಜಗತ್ತಿನಲ್ಲಿ ಅಂತಹ ವರ್ತನೆ ಎಲ್ಲಿ ಸಾಧ್ಯ ಹೇಳು ? ನಾವು ಪ್ರೇಮ-ದಯೆ ಎಂದು ಕರೆಯುವುರಲ್ಲಿಯೂ ವಾಸ್ತವವಾಗಿ ನಮ್ಮ ಸ್ವಾರ್ಥವೇ ಇರುತ್ತದೆ. ಈ ಘಟನೆಯನ್ನು ತೆಗೆದುಕೋ. ಅವನು ಮಗ ಹೋದುದಕ್ಕಾಗಿ ಅಳುತ್ತಿದ್ದಾನೆ ನಿಜ. ಆದರೆ ಮಗನಿಗಾಗಿ ಅಳುತ್ತಿಲ್ಲ. ತನಗಾಗಿ ಅಳುತ್ತಿದ್ದಾನೆ. ತನಗಿನ್ನು ಯಾರು ದಿಕ್ಕು ಎಂದೇ ಆತನ ಯೋಚನೆ. ಮೀನನ್ನು ಕೊಲ್ಲುವಾಗ ಅವನಿಗೆ ದುಃಖವಾಗುವುದಿಲ್ಲ. ಏಕೆಂದರೆ ಅದರ ಕೊಲೆಯೇ ಇವನ ಹೊಟ್ಟೆಯ ಆಹಾರಕ್ಕೆ ಸಾಧನ. ಈ ಸ್ವಾರ್ಥ ಭಾವನೆಗಳಿಂದ ಮೀರಿ ನಿಂತಾಗ ನಿಜವಾದ ಪ್ರೇಮ ಸಾಧ್ಯವಾಗುತ್ತದೆ. ಅದು ನಿಜವಾದ `ದಯೆ'ಯಾಗುತ್ತದೆ. ಆಗ ದಯೆಯೇ ಧರ್ಮದ ಮೂಲವಾಗುತ್ತದೆ. ಅದನ್ನು ಸಾಧಿಸಬೇಕೆಂಬುದೇ ಬಸವಣ್ಣನ ಅಹಿಂಸೆಯ ಸಂದೇಶ. ಆದರೆ ಈ ಶಾಂತಿ ಸಂದೇಶಕ್ಕೆ ಬರಬೇಕಾದರೆ ಹಿಂಸಾಮಯವಾದ ಈ ಜಗತ್ತು ಇನ್ನೂ ಯುಗಯುಗಗಳನ್ನು ಕಳೆಯಬೇಕೆಂದು ತೋರುತ್ತದೆ. ಬಹುಶಃ ಆಗ ಅಣ್ಣನ ಕಾರ್ಯ ಇನ್ನೂ ಉಜ್ವಲವಾಗಿ ಕಂಡೀತು.

ಮಹಾದೇವಿಯ ಮನಸ್ಸು ಈ ಮಾತುಗಳ ಅರ್ಥವನ್ನೇ ಮಥಿಸತೊಡಗಿತು. ಮೌನವನ್ನು ಧರಿಸಿ ಸಂಗಮದೇವರೊಡನೆ ನಡೆಯುತ್ತಿದ್ದಳು. ಊರು ಸಮೀಪವಾಗುತ್ತಿತ್ತು. ಇನ್ನೇನು ಊರನ್ನು ಪ್ರವೇಶಿಸಬೇಕು. ಅಷ್ಟರಲ್ಲಿ ಇಬ್ಬರೂ ಭಕ್ತರು ಆತುರವಾಗಿ ಬಂದು ಸಂಗಮದೇವರಿಗೂ ಮಹಾದೇವಿಗೂ ನಮಸ್ಕರಿಸಿದರು. ಸಂಗಮದೇವರು ಅವರನ್ನೇ ನೋಡುತ್ತಾ ಕೇಳಿದರು :

``ಯಾರು ನೀವು ?

``ನಾವು ಕಲ್ಯಾಣದಿಂದ ಅಣ್ಣನ ಭಕ್ತರು - ಅವರಲ್ಲಿ ಒಬ್ಬ ಹೇಳಿದ.

``ಬಸವಣ್ಣನವರಿಂದ ಆಜ್ಞಪ್ತರಾಗಿ ಬಂದಿದ್ದೀರಾ ? ಏನು ನಿರೂಪಿಸಿದ್ದಾರೆ ಬಸವೇಶ್ವರರು? ಕುತೂಹಲದಿಂದ ಕೇಳಿದರು ಸಂಗಮದೇವರು.

``ಈ ಮಾರ್ಗದಲ್ಲಿ ಒಬ್ಬ ಮಹಾಶಿವಶರಣೆಯರು ಬರುತ್ತಿದ್ದಾರಂತೆ ! ಅವರ ದರ್ಶನವನ್ನು ಪಡೆದು ಆ ವಾರ್ತೆಯನ್ನು ತಿಳಿಸುವಂತೆ ಆಜ್ಞಾಪಿಸಿದ್ದಾರೆ. ಅದಕ್ಕಾಗಿ ಅನೇಕ ಭಕ್ತರು ಅಲ್ಲಲ್ಲಿ ತಿರುಗುತ್ತಿದ್ದಾರೆ. ನಾವು ತಮ್ಮನ್ನೂ ತಮ್ಮ ಬಳಿ ಬರುವ ಈ ತಾಯಿಯನ್ನೂ ಕಂಡು ನಮ್ಮ ಕುತೂಹಲವನ್ನು ಶಾಂತಪಡಿಸಿಕೊಳ್ಳಬೇಕೆಂದು ಬಂದೆವು.