``ಇದು ಬರಿಯ ಆಡಂಬರದ ಮಾತು. ಮಾತಿನಂತೆ ನಡೆ ಇಲ್ಲದವರನ್ನು ಗುಹೇಶ್ವರ ಮೆಚ್ಚುವುದಿಲ್ಲ. ನಿನ್ನ ದೇಹದ ಮೇಲಿನ ಮೋಹ ನಿನಗೆ ಸಂಪೂರ್ಣವಾಗಿ ಅಳಿದಿದ್ದರೆ, ಸೀರೆಯನ್ನು ಬಿಟ್ಟು ಕೂದಲಮರೆಯನ್ನೇಕೆ ಮಾಡಿಕೊಂಡಿದ್ದೀಯ? ಅಲಂಕಾರದ ಸೀರೆಯನ್ನು ಬಿಟ್ಟು ನಿನಗೆ ಈ ನಾರುಸೀರೆಯ ಹಂಗು ಬಿಡಲಿಲ್ಲ, ಅಲ್ಲವೆ ! ಅದರ ಮೇಲೆ ಕೂದಲಿನ ಮರೆ ಬೇರೆ ! ಅಂತರಂಗದ ನಾಚಿಕೆ ಬಹಿರಂಗದಲ್ಲಿ ತೋರುತ್ತದೆ. ಇದೆಲ್ಲಾ ಗುಹೇಶ್ವರ ಲಿಂಗಕ್ಕೆ ಮೆಚ್ಚುಗೆಯಾಗುವ ಮಾತಲ್ಲ.
ಪ್ರಭುದೇವನ ಈ ನಿಷ್ಠುರವಾದ ಮಾತುಗಳಿಂದ ಶರಣರೆಲ್ಲಾ ನೊಂದರು. ಆದರೆ ಯಾರೂ ಏನನ್ನೂ ಹೇಳುವಂತಿರಲಿಲ್ಲ. ಇದಕ್ಕೆ ಮಹಾದೇವಿಯ ಉತ್ತರವೇನೆಂಬ ಕಾತರತೆ ಎಲ್ಲರ ಮುಖಗಳ ಮೇಲೂ ಎದ್ದು ಕಾಣುತ್ತಿತ್ತು. ಮಹಾದೇವಿ ಕ್ಷಣಕಾಲ ಕಣ್ಣುಮುಚ್ಚಿ ಮೌನವಾಗಿದ್ದಳು. ಗುರುಲಿಂಗರ ದಿವ್ಯವಿಗ್ರಹ ಅವಳ ಅಂತರಂಗದ ಕಣ್ಣುಮುಂದೆ ಸುಳಿಯಿತು. ಅನಂತರ ಕಣ್ತೆರೆದು ಮುಗುಳು ನಗುತ್ತಾ ಹೇಳಿದಳು :
``ನಿಜ, ಒಂದರ ಹಂಗನ್ನು ಬಿಟ್ಟು ಇನ್ನೊಂದರ ಹಂಗನ್ನು ನಾನು ಹಿಡಿದಿದ್ದೇನೆ ಎಂದು ನೀವು ಹೇಳುವ ಮಾತು ನಿಜ. ಆದರೆ ಅದು ನನಗಾಗಿ ಅಲ್ಲ ; ಹೇಳುತ್ತೇನೆ ಕೇಳಿ, ಇದು ನಿಮಗಾಗಿ : ಅಂದರೆ ಜನರ ಹಂಗಿಗಾಗಿ ಇದನ್ನು ಅವಲಂಬಿಸಿದ್ದೇನೆ.
ಅಲ್ಲಮನ ದಿಟ್ಟತನಕ್ಕೆ ಸಂವಾದಿಯಾದ ಮಹಾದೇವಿಯ ಉತ್ತರದಿಂದ ಸಭೆ ನಡುಗಿತು. ಮತ್ತೆ ಮೊಳಗಿತು ಮಹಾದೇವಿಯ ಧ್ವನಿ :
ಫಲ ಒಳಗೆ ಪಕ್ವವಾಗಿಯಲ್ಲದೆ
ಹೊರಗಣ ಸಿಪ್ಪೆ ಒಪ್ಪಗೆಡದು
ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿತೆಂದು
ಆ ಭಾವದಿಂದ ಮುಚ್ಚಿದೆ ; ಇದಕ್ಕೆ ನೋವೇಕೆ ?
ಕಾಡದಿರಣ್ಣಾ, ಚೆನ್ನಮಲ್ಲಿಕಾರ್ಜುನದೇವರ ದೇವನ
ಒಳಗಾದವಳಾ.
ಈ ದಿಟ್ಟತನದ ಹಿಂದಿರುವ ಮಹಾದೇವಿಯ ವೈರಾಗ್ಯದ ನಿಲುವನ್ನು ಕಂಡು ಶರಣರ ಸಂತೋಷ ತಡೆಯಲಾರದೆ ಹೋಯಿತು. ಮೆಚ್ಚುಗೆಯ ಉದ್ಗಾರಗಳು ಅವರ ಹಿಡಿತವನ್ನು ಮೀರಿ ಹೊರಬೀಳತೊಡಗಿತು. ಆದರೆ ಪ್ರಭುದೇವರ ದೃಷ್ಟಿ ಇನ್ನೂ ಪ್ರಸನ್ನವಾಗಿರಲಿಲ್ಲ. ಮತ್ತೆ ತಮ್ಮ ಭಾವನೆಗಳನ್ನು