ಪುಟ:Kadaliya Karpoora.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦

ಕದಳಿಯ ಕರ್ಪೂರ

ಪ್ರಭು ಆಶ್ಚರ್ಯಗೊಂಡ ಅವಳ ಉತ್ತರದಿಂದ. ಆದರೆ ಅದನ್ನು ತೋರ್ಪಡಿಸದೆ ಮತ್ತೆ ಹೇಳಿದ:

``ಅದು ಹೋಗಲಿ, ಅರಿಷಡ್ವರ್ಗಗಳಿಂದಲೇ ನಿರ್ಮಿತವಾದ ಈ ದೇಹದಲ್ಲಿದ್ದು ಅವುಗಳನ್ನು ದಾಟಿದ್ದೇನೆಂದರೆ ಅದನ್ನು ನಂಬುವುದು ಹೇಗೆ?

ಕಾಮದಿಂದ ಕಂಡ, ಕ್ರೋಧದಿಂದ ಆಸ್ಥಿ,

ಲೋಭದಿಂದ ಸಕಲ ವಿಷಯಗಳು ;

ಮೋಹದಿಂದ ಓಡಿಹೆನೆಂಬುದೆಲ್ಲವು ಕಾಮನ ಬಲೆಯೊಳಗು

ಕಾಮನ ಗೆದ್ದ ತಾವಾವುದು ಹೇಳಾ,

ಗುಹೇಶ್ವರಲಿಂಗಕ್ಕೆ ?

ಉಜ್ಜಿದಷ್ಟೂ ಕಾಂತಿಯನ್ನು ಕೊಡುವ ಅಪರಂಜಿಯಂತೆ ಮಹಾದೇವಿಯ ಮುಖ ಮಿಂಚಿತು ಪ್ರಭುವಿನ ಈ ಮಾತನ್ನು ಕೇಳಿ ಹೇಳಿದಳು :

``ಕಾಮವನ್ನು ಗೆದ್ದ ಠಾವನ್ನು ಹೇಳಬೇಕೇ, ಪ್ರಭುವೇ ಇಲ್ಲ... ಇನ್ನೂ ಮುಂದುವರಿದು ಹೇಳುತ್ತೇನೆ ; ಕಾಮನನ್ನು ಗೆಲ್ಲುವುದಕ್ಕೆ ಆ ಕಾಮ, ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿಯೇ ಇಲ್ಲ, ಕೇಳಿರಿ :

ಅಂಗದ ಭಂಗವ ಲಿಂಗಸುಖದಿಂದ ಗೆಲಿದೆ,

ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ

ಜೀವದ ಭಂಗವ ಶಿವಾನುಭವದಿಂದ ಗೆಲಿದೆ,

ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ,

ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ

ಸುಟ್ಟುರುಹಿದ ಭಸ್ಮವ ನೋಡಯ್ಯ ?

ಚೆನ್ನಮಲ್ಲಿಕಾರ್ಜುನ, ಕಾಮನ ಕೊಂದು ಮನಸಿಜನಾಗುಳುಹಿದರೆ,

ಮನಸಿಜನ ತಲೆಯ ಬರೆಹವ ತೊಡೆದನು.

``ನನ್ನ ಪತಿ ಚೆನ್ನಮಲ್ಲಿಕಾರ್ಜುನ, ಕಾಮನನ್ನು ಕೊಂದು ಮತ್ತೆ ಅವನನ್ನು ಬದುಕಿಸಿ ಮನಸಿಜನನ್ನಾಗಿ ಮಾಡಿದ `ನೆನೆಯುವವರ ಮನದಲ್ಲಿ ಹುಟ್ಟು' ಎಂದು ಅವನ ಹಣೆಯ ಬರಹವ ಬರೆದ. ಆದರೆ ನಾನು ಮನಸಿಜನ ಆ ತಲೆಯ ಬರಹವನ್ನೇ ತೊಡೆದುಹಾಕಿದ್ದೇನೆ. ನನ್ನ ಮನಸ್ಸು ಎಂದೂ ಮನಸಿಜನ ಜನನಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ನಿಮ್ಮಂತಹ ಕೆಲವರು ಮಾತ್ರ ಇದನ್ನು ಅರ್ಥಮಾಡಿಕೊಳ್ಳಬಲ್ಲಿರಿ - ಎಂದು ಇಂದು ನಿಮ್ಮ ಮುಂದೆ ಇದನ್ನು ಇಡುತ್ತಿದ್ದೇನೆ.