... ಕಾಸಿ ಕಮ್ಮಾರನಾದ, ಬೀಸಿ ಮಾಡಿವಾಳನಾದ ;
ಹಾಸನಿಕ್ಕಿ ಸಾಲಿಗನಾದ, ವೇದನವನೋದಿ ಹಾರುವನಾದ ;
ಇದುಕಾರಣ, ಕೂಡಲಸಂಗಮದೇವಾ,
ಅಂಗಸ್ಥಲವನರಿದವನೇ ಕುಲಜನು.
ಎಂದು ಅಣ್ಣನವರು ಹೇಳುವಂತೆ ಅದು ವ್ಯಕ್ತಿಯ ಮನೋಧರ್ಮಕ್ಕೆ ಅನುಗುಣವಾಗಿ ನಿರ್ಧಾರವಾಗಬೇಕಾದುದೇ ಹೊರತು ಹುಟ್ಟಿನಿಂದ ಅಲ್ಲ. ಅಲ್ಲದೆ ಉದ್ಯೋಗದಲ್ಲಿ ಮೇಲು-ಕೀಳೆಂಬುದೇ ಇಲ್ಲ. ಸಮಾಜದ ಹಿತಕ್ಕೆ ಕಾರಣವಾದ ಯಾವ ಉದ್ಯೋಗವನ್ನು ಕೈಗೊಂಡಿದ್ದರೂ ಅದು ಪವಿತ್ರವಾದುದು. ಆ ಉದ್ಯೋಗದ ಮೂಲಕವೇ ಆತ್ಮದ ಉದ್ಧಾರವನ್ನು ಸಾಧಿಸಲು ಉದ್ಯುಕ್ತನಾಗಬೇಕು. ಮತ್ತು ಅದಕ್ಕೆ ಸಮಾಜದಲ್ಲಿ ಎಲ್ಲ ಅವಕಾಶಗಳೂ ಇರಬೇಕು. ಅದನ್ನೇ ಅಣ್ಣನವರು ಸಾಧಿಸುತ್ತಿರುವುದು.
ಶರಣರೆಲ್ಲ ಒಂದೇ ಮನಸ್ಸಿನಿಂದ ಕೇಳುತ್ತಿದ್ದರು. ಸಿದ್ಧರಾಮ ತನ್ನ ಮೆಚ್ಚುಗೆಯನ್ನು ಅಡಗಿಸಿಕೊಳ್ಳಲಾರದೆ ಮೇಲೆದ್ದು ಹೇಳತೊಡಗಿದ :
``ಹೌದು, ಚನ್ನಬಸವಣ್ಣನ ವಿವರಣೆ ತುಂಬಾ ಸುಂದರವಾಗಿದೆ. ಆ ದೃಷ್ಟಿಯಿಂದ ನೋಡಿದಾಗ ಧರ್ಮದ ಎದುರಿನ ಜಾತಿ ಮತ ಎಂಬ ವಿಭಜನೆಯಾಗಲಿ, ಹೆಣ್ಣು ಗಂಡು ಎಂಬ ಭೇದವಾಗಲಿ ಅಸಹಜವೆಂದು ಗೋಚರಿಸುತ್ತದೆ. ದೇವರ ದಾಸಿಮಯ್ಯ ಹೇಳಿರುವ ಈ ಮಾತುಗಳನ್ನ ಇಲ್ಲಿ ನೆನಸಿಕೊಳ್ಳಬಹುದು.
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದಿತ್ತೇ ?
ಒಡೆಯನ ಪ್ರಾಣಕ್ಕೆ ಇದ್ದಿತ್ತೇ ಯಜ್ಞೋಪವೀತ ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೇ ಪ್ರಾಣದಲ್ಲಿ ಹಿಡಿಗೋಲ ?
ನೀ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ ಬಲ್ಲರೈ ರಾಮನಾಥ
``ಹೌದು ಸಿದ್ಧರಾಮಯ್ಯ, ಹೌದು ಅಲ್ಲಮ ಉದ್ಗರಿಸಿದ : ``ಲೋಕದ ಜಡರು ಅರಿಯಲಾರದ ತೊಡಕು ಇದು. ಈ ತೊಡಕಿನಿಂದ ಸಮಾಜದಲ್ಲಿ ಉಂಟಾಗಿರುವ ಒಡಕನ್ನು ತಿದ್ದಲು ಬಸವಣ್ಣ ಸಾಹಸಪಡುತ್ತಿದ್ದಾನೆ ಎಂದು ಬಸವಣ್ಣನ ಕಡೆ ತಿರುಗಿ ಅವನನ್ನು ಕೇಳಿದ :
``ಬಸವೇಶ್ವರಾ, ನೀನೂ ಎರಡು ಮಾತನ್ನು ಹೇಳು ಇದನ್ನು ಕುರಿತು. ಬಸವೇಶ್ವರ ಮೇಲೆದ್ದ. ಚನ್ನಬಸವಣ್ಣ ಸಿದ್ಧರಾಮ ಕುಳಿತುಕೊಂಡರು. ಬಸವಣ್ಣ ವಿನಯದಿಂದ ಸಭೆಗೆ ವಂದಿಸಿ ಪ್ರಾರಂಭಿಸಿದ :