ಸ್ವಸ್ಥಾನ ಸುಸ್ಥಿರದ ಸುಮನ ಮಂಟಪದೊಳಗೆ,
ನಿತ್ಯನಿರಂಜನ ಪ್ರಭೆಯ ಬೆಳಗು ;
ಶಿವಯೋಗದನುಭಾವ ಏಕಾರ್ಥವಾಗಿ
ಗುಹೇಶ್ವರಾ, ನಿಮ್ಮ ಶರಣನು ಅನುಪಮ ಸುಖಿಯಾಗಿರ್ದನು
ಈ ಅನುಪಮ ಆನಂದದ ಸುಖ, ದೇಹವೆಂಬ ಶ್ರೀಗಿರಿಯನ್ನೇರಿ, ಹೃದಯ ಕದಳಿಯ ಗರ್ಭದಲ್ಲಿ ನಿಂತು ಪಡೆಯುವ ಫಲ. ಅದನ್ನು ಮೊದಲು ಸಾಧಿಸು ಮಹಾದೇವಿ. ಈ ಸಾಹಸದ ಸಾಧನೆಯ ಸಂಕೇತವಾಗಿ ಅನಂತರ ಬೇಕಾದರೆ ಶ್ರೀಶೈಲದ ಕದಳಿಗೂ ಹೋಗು.
ಪ್ರಭುದೇವನ ಒಂದೊಂದು ಮಾತೂ ಮಹಾದೇವಿಯ ಕೊನೆಯ ಗುರಿಯನ್ನು ಗುರುತಿಸಿ ಕರೆತರುವ ಮಾಂತ್ರಿಕ ವಾಣಿಯಂತಿತ್ತು. ಮಂತ್ರಮುಗ್ಧಳಾದವಳಂತೆ ಮಹಾದೇವಿ ಕೇಳುತ್ತಿದ್ದಳು. ಮಾತು ಮುಗಿದರೂ ಅದರ ಪ್ರಭಾವ, ಮಾತಿಗೆ ಮೀರಿದ ಭವ್ಯದರ್ಶನವನ್ನು ಅವಳ ಕಣ್ಣ ಮುಂದೆ ತಂದು ನಿಲ್ಲಿಸಿತ್ತು ; ಮಾತನ್ನು ಮೌನವಾಗಿಸಿತ್ತು. ಕೊನೆಯಲ್ಲಿ ಕೇಳಿದಳು:
``ನೀವು ಹೇಳಿದಂತೆ ಸ್ವಸ್ಥಾನಸುಸ್ಥಿರದ ಸುಮನಮಂಟಪದೊಳಗೆ ನಿತ್ಯ ನಿರಂಜನಪ್ರಭೆಯ ಬೆಳಗಿನಲ್ಲಿ ನಲಿಯುವ ಶಿವಯೋಗದನುಭಾವ, ನನಗೆ ಇನ್ನೂ ಲಭಿಸಿಲ್ಲವೇಕೆ, ಗುರುಗಳೇ?
ಆ ಸಹಜಾನಂದದ ಸ್ವರೂಪವೇ ಮೈವೆತ್ತ ಮೂರ್ತಿ ನೀನು. ಅದಕ್ಕಾಗಿ ನೀನು ಬೇಡಬೇಕಾಗಿಲ್ಲ. ನಿನಗಾಗಿ ಕಾದು ನಿಂತಿದೆ ಅದು. ನಾಲ್ಕು ದಿನ ನಿನ್ನ ಈ ಲೀಲೆಯನ್ನು ತೋರಿಸುವುದಕ್ಕಾಗಿ ಅದನ್ನು ಅತ್ತ ಮರೆಮಾಡಿ ಬಂದು ನಿಂತಿದ್ದೀಯ. ಅತ್ತ ನೋಡಿ ಅದನ್ನು ಆಹ್ವಾನಿಸು. ಅದು ಅವತರಿಸಿ ಬಂದು ನಿನ್ನನ್ನು ತಬ್ಬಿ ತಣಿಸುತ್ತದೆ. ಮಹಾದೇವಿ ಮೇಲೆದ್ದು ನಮಸ್ಕರಿಸಿದಳು ಪ್ರಭುದೇವನಿಗೆ. ``ಏಳು ಮಹಾದೇವಿ, ಮೇಲೇಳು. ಇದೆಲ್ಲಾ ಇನ್ನು ಬೇಕಿಲ್ಲ. ನೀನಾರು ನಾನಾರು ? ತನ್ನ ಲೀಲೆಗಾಗಿ, ತಾನೇ ಗುರುವಾದ ತಾನೇ ಶಿಷ್ಯನಾದ ಎಂದು ಅವಳ ತಲೆಯ ಮೇಲೆ ಕೈಯನ್ನಿಟ್ಟ ಅಲ್ಲಮ.
ಅಪೂರ್ವವಾದ ಅನುಭವವೊಂದು ಮಿಂಚಿ, ಭ್ರೂಮಧ್ಯದಲ್ಲಿ ಲೀನವಾಗಿ ದೇಹವನ್ನು ವ್ಯಾಪಿಸಿದಂತಾಯಿತು ಮಹಾದೇವಿಗೆ. ಅಂತರಂಗದಲ್ಲಿ ಮಿಂಚಿನ ಮಳೆಗರೆದಂತಾಯಿತು. ಅದರ ಸಂಕೇತವೋ ಎಂಬಂತೆ ಅವಳ ಕಣ್ಣುಗಳಿಂದ ಆನಂದ ಬಾಷ್ಪಗಳು ಸುರಿಯುತ್ತಿದ್ದುವು.