ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲ್ಯಾಣದಿಂದ ಕದಳಿ
೨೨೯


ಇತ್ತ ಮಹಾಮನೆಯಲ್ಲಿ ನಿತ್ಯದ ಕರ್ಮಗಳೆಲ್ಲಾ ಮುಗಿದವು. ಜಂಗಮರೆಲ್ಲಾ ಅಲ್ಲಮಪ್ರಭುವಿಗೆ ನಮಸ್ಕರಿಸಿ ವಿಶ್ರಾಂತಿಯನ್ನು ಪಡೆಯಲು ಹೋಗುತ್ತಿದ್ದರು. ಅನುಭವಮಂಟಪದ ಪಕ್ಕದಲ್ಲಿ ಗುಹೇಶ್ವರನ ಗುಹೆಯಂತಿದ್ದ ಒಂದು ಚಿಕ್ಕ ಕೋಣೆಯೇ ಅಲ್ಲಮನ ನಿವಾಸಸ್ಥಾನವಾಗಿತ್ತು. ಅದರ ಮುಂಭಾಗದಲ್ಲಿ ಅಲ್ಲಮ ನಿಧಾನವಾಗಿ ಹೆಜ್ಜೆ ಹಾಕುತ್ತಾ ಅತ್ತ ಇತ್ತ ತಿರುಗಾಡುತ್ತಿದ್ದ. ಹೊಂಬಣ್ಣದಿಂದ ಹಾಲಿನ ಬಣ್ಣಕ್ಕೆ ತಿರುಗುತ್ತಾ ಮೇಲೇರಿ ಬರುತ್ತಿದ್ದ ಚಂದ್ರನ ಕಿರಣಗಳು ಪ್ರಭುದೇವನ ಕಾಲ ಕೆಳಗೆ ನೆಳಲು ಬೆಳಕಿನ ರಂಗವಲ್ಲಿಯನ್ನು ರಚಿಸಿದ್ದುವು.

ಸಮಯ ಉರುಳುತ್ತಿತ್ತು. ಮಹಾಮನೆಯಲ್ಲೆಲ್ಲಾ ನಿಶ್ಶಬ್ಧ ಆವರಿಸಿತು. ಅನುಷ್ಠಾನದಲ್ಲಿ, ಅಧ್ಯಯನದಲ್ಲಿ ತೊಡಗಿದ್ದ ಶರಣರ ಕೋಣೆಗಳಿಂದ ಮಾತ್ರ ಮಬ್ಬು ಬೆಳಕು ಹೊರಹೊಮ್ಮಿಬರುತ್ತಿತ್ತು. ಪ್ರಭುದೇವ ಹಾಲುಬೆಳದಿಂಗಳಿನಲ್ಲಿ ಮೀಯುತ್ತಾ ಇನ್ನೂ ತಿರುಗಾಡುತ್ತಲೇ ಇದ್ದ. ತನ್ನ ಪ್ರಯೋಗದ ಫಲಿತಾಂಶವನ್ನು ನಿರೀಕ್ಷಿಸುತ್ತಿರುವ ವಿಜ್ಞಾನಿಯ ಕುತೂಹಲ ಆತನಲ್ಲಿ ಕಾಣುತ್ತಿತ್ತು.

ಮಹಾಮನೆಯ ಮಂತ್ರಿ ಶಾಖೆಯತ್ತಣಿಂದ ಬಸವೇಶ್ವರ ಹೊರಗೆ ಬಂದ. ಅವನನ್ನು ಕೇಳಿದ ಪ್ರಭು :

``ಏನು ಬಸವಣ್ಣ, ಇಂದಿನ ಕಾಯಕ ಮುಗಿಯಿತೇ ?

``ಮುಗಿಯಿತು, ಪ್ರಭುವೇ. ಅರಮನೆಯ ಭಂಡಾರದ ಲೆಕ್ಕ ಸರಿಯಾಗಿಲ್ಲ ಎಂದು ಯಾರೋ ಹೇಳಿದರಂತೆ ರಾಜರಿಗೆ. ಅದರ ವಿಚಾರಣೆಗೆ ಮಧ್ಯಾಹ್ನ ಅಷ್ಟು ಅವಸರದಿಂದ ರಾಜರು ನನ್ನನ್ನು ಕರೆಸಿದರು. ಇದ್ದಕ್ಕಿದ್ದಂತೆಯೇ ಭಂಡಾರದ ಹಣವನ್ನೆಲ್ಲಾ ಲೆಕ್ಕಮಾಡಿಸಿ ನೋಡಿದರು. ನಾನು ಭಂಡಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದೇನೆಂದು ರಾಜರ ಬಳಿ ಹೇಳಿದ್ದನಂತೆ ಮಂಚಣ್ಣ. ಆದರೆ ಕೊನೆಯ ಕಾಸಿನವರೆಗೂ ಲೆಕ್ಕ ಸರಿಯಾಗಿತ್ತು. ಮಹಾರಾಜರೇ ಹೇಳಿ, ಕೊಡಿಸಿದ ಒಂದೆರಡು ಲೆಕ್ಕಗಳನ್ನು ಮಾತ್ರ ಕರುಣಿಕರು ಬರೆದಿರಲಿಲ್ಲ. ನಾನು ಅದನ್ನು ಜ್ಞಾಪಿಸಿಕೊಟ್ಟೆ, ಒಪ್ಪಿದರು. ಅದನ್ನು ಮರೆಯುವುದಕ್ಕೆ ಮುನ್ನ ಪುಸ್ತಕದಲ್ಲಿ ಬರೆಸಿಡಬೇಕೆಂದು ನಿರ್ಧರಿಸಿ ಕರಣಿಕರಿಗೆ ಮನೆಗೆ ಬರುವಂತೆ ಹೇಳಿದ್ದೆ, ಇಷ್ಟು ಹೊತ್ತು ಅದನ್ನೇ ಬರೆಸುತ್ತಿದ್ದೆ. ಈಗದು ಮುಗಿಯಿತು. ವಿಷಯವನ್ನು ವಿವರಿಸಿದ ಬಸವೇಶ್ವರ.

``ಆ ಮಂಚಣ್ಣ ನಿಮಗೆ ಬಹಳ ಕಿರುಕುಳವನ್ನು ಕೊಡುತ್ತಿದ್ದಾನೆ ಅಲ್ಲವೇ? ಬಿಜ್ಜಳನೂ ಅವನ ಮಾತಿಗೆ ಹೆಚ್ಚಾಗಿ ಕಿವಿಕೊಡುವಂತೆ ತೋರುತ್ತದೆ ? ಪ್ರಭು ಕೇಳಿದ.