ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೩೦
ಕದಳಿಯ ಕರ್ಪೂರ


``ನಿಮ್ಮ ದಯೆಯಿಂದ ಅದಾವುದೂ ನನಗೆ ಏನೂ ಮಾಡುವಂತಿಲ್ಲ. ನನ್ನ ಮೇಲೆ ಅಪವಾದವನ್ನು ತರಲು ಹೋಗಿ ಅವನೇ ಸಿಕ್ಕಿಬೀಳುತ್ತಿದ್ದಾನೆ. ನನಗಿರುವ ಒಂದು ಸಂಕಟವೆಂದರೆ, ಜನತೆಯ ಉದ್ಧಾರದ ಧರ್ಮಮಾರ್ಗದಲ್ಲಿ ಹೆಜ್ಜೆ ಹೆಜ್ಜೆಗೂ ಕಂಟಕವನ್ನು ತಂದೊಡ್ಡುತ್ತಿದ್ದಾನೆ.

``ನಿನ್ನ ಧರ್ಮದ ಕ್ರಾಂತಿ ಸ್ವಲ್ಪ ನಿಧಾನವಾಗಿಯೇ ಹೆಜ್ಜೆಯನ್ನಿಡಲಿ ಬಸವಣ್ಣ. ಸಮಾಜದಲ್ಲಿ ಬಹುಕಾಲದಿಂದ ರೂಢಮೂಲವಾಗಿ ಬಂದ ಅಜ್ಞಾನವನ್ನು ಒಂದೇ ಏಟಿಗೆ ಕತ್ತರಿಸುವುದು ಅಪಾಯಕಾರಿಯಾಗಲೂ ಬಹುದು. ಅದನ್ನು ಅಲ್ಲಾಡಿಸಿ ಬೇರನ್ನು ಸಡಿಲಗೊಳಿಸಿ ಕಿತ್ತು ಹಾಕಬೇಕಾಗುತ್ತದೆ. ಎಚ್ಚರಿಕೆಯಿಂದ ಹೆಜ್ಜೆಯನ್ನಿಡಬೇಕಾಗುತ್ತದೆ ಪ್ರಭು ಎಚ್ಚರಿಸಿದ.

``ನಿಜ, ಪ್ರಭುವೇ. ಆದರೂ ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಕಂಡು ಒಮ್ಮೊಮ್ಮೆ ರೋಷ ಉಕ್ಕೇರುತ್ತದೆ. ನಾಳೆ ಆಗುವ ಕ್ರಾಂತಿ ಇಂದೇ ಆಗಹೋಗಲಿ ಎನಿಸುತ್ತದೆ.

``ಆತುರಗೊಳ್ಳಬೇಡ, ಬಸವಣ್ಣ. ಅದಕ್ಕೆಲ್ಲ ಅತೀತವಾಗಿ ನಿಂತುನೋಡುವ ಸಾಕ್ಷೀಪ್ರಜ್ಞೆ ಬಲವತ್ತರವಾಗಿ ಬೆಳೆಯಬೇಕು. ನೀನೇನು ಅರಿಯದವನಲ್ಲ. ಕ್ಷಣಕಾಲ ಮೌನವಾವರಿಸಿತು. ಅನಂತರ ಬಸವಣ್ಣ ಮಾತನ್ನು ಬೇರೆಯ ಕಡೆಗೆ ತಿರುಗಿಸುತ್ತಾ ಹೇಳಿದ :

``ಅದಿರಲಿ... ಇಂದು ಮಹಾದೇವಿ ತಮ್ಮ ಬಳಿ ಅನುಭಾವದ ಜಿಜ್ಞಾಸೆಗೆ ಬಂದಂತೆ ತೋರುವುದಿಲ್ಲ ?

``ಅದನ್ನೇ ನಾನು ನಿರೀಕ್ಷಿಸಿ ಇಲ್ಲಿ ತಿರುಗಾಡುತ್ತಿದ್ದೆ ಬಸವಣ್ಣ. ಚರ್ಚೆ ಜಿಜ್ಞಾಸೆಗಳನ್ನು ಮೀರಿ ನಿಂತಿರುವ ಮಹಾಬೆಳಗನ್ನು ಇಂದು ಆ ಮಹಾಚೇತನ ಪಡೆಯಬೇಕಾಗಿದೆಯೆಂದು ನಿರೀಕ್ಷಿಸಿ ಹಾರೈಸುತ್ತಿದ್ದೇನೆ.

ಮಾತು ಮುಗಿಯುವುದರೊಳಗೆ ನೀಲಾಂಬಿಕೆ ಬಳಿಗೆ ಬರುತ್ತಿರುವುದನ್ನು ಕಂಡು ಪ್ರಭುದೇವ ಕೇಳಿದ. ``ಏನು ತಾಯಿ, ಮುಗಿಯಿತೆ ನಿನ್ನ ನಿತ್ಯದ ಕರ್ಮಯೋಗ? ಮಹಾದೇವಿ ಎಲ್ಲಿ ?

``ಅದನ್ನೇ ಹೇಳುವುದಕ್ಕೆ ಬಂದೆ, ಸ್ವಾಮಿ. ನೀಲಮ್ಮ ಹೇಳತೊಡಗಿದಳು:

``ಎಂದಿಗಿಂತ ಮುಂಚೆಯೇ ಸ್ನಾನಮಾಡಿ ಪೂಜೆಗೆ ಹೋದಳು ಮಹಾದೇವಿ ಇಷ್ಟು ಹೊತ್ತಾದರೂ ಹೊರಗೆ ಬರಲಿಲ್ಲ. ಅದಕ್ಕಾಗಿ ಕುತೂಹಲಗೊಂಡು ಮೆಲ್ಲನೆ ಒಳಗೆ ಹೋದೆ. ಆ ಮಂಗಳಕರವಾದ ದೃಶ್ಯವನ್ನು ಕಂಡು ಚಕಿತಳಾದೆ.