ಪುಟ:Kadaliya Karpoora.pdf/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕದಳಿಯ ಕರ್ಪೂರ

೨೩೭

``ಅದು ಅವಳ ಎಳೆಯತನದಿಂದ ಬೆಳೆದುಬಂದು ಸಂಸ್ಕಾರದ ಫಲ, ಬಸವಣ್ಣ. ಅದೊಂದು ಬಯಕೆ ಅರಕೆಯಾಗಿ ಉಳಿಯುವುದೇಕೆ ! ಮಹಾದೇವಿಯ ಬಯಕೆಯನ್ನು ಸಮರ್ಥಿಸುತ್ತಾ ಹೇಳಿದ ಪ್ರಭು. ಮತ್ತೆ ಮಾತನಾಡಲು ಬಸವಣ್ಣನಿಗೆ ಅವಕಾಶವೇ ಇರಲಿಲ್ಲ.

ಮಹಾದೇವಿ ಕಲ್ಯಾಣವನ್ನು ಬಿಡುವಳೆಂಬ ಸುದ್ದಿ ಕ್ಷಣಮಾತ್ರದಲ್ಲಿ ಮಹಾಮನೆಯನ್ನೆಲ್ಲಾ ವ್ಯಾಪಿಸಿತು.

ಅಂದು ಸಂಜೆಯ ಅನುಭವಮಂಟಪದ ವಿಷಯವೆಲ್ಲ ನಾಳಿನ ಅಗಲುವಿಕೆಯನ್ನು ಕುರಿತದ್ದೇ ಆಯಿತು. ಶ್ರೀಶೈಲಪರ್ವತ, ಕದಳಿಯ ವನ - ಇವುಗಳೇ ಅಂದಿನ ಪ್ರಮುಖವಾದ ವಿಷಯಗಳಾದವು. ಶ್ರೀಶೈಲ ಕ್ಷೇತ್ರವೇ ತನ್ನ ಸಾಧನೆಯ ರಂಗವಾಗಿದ್ದ ಸಿದ್ಧರಾಮ, ಅದರ ವಿವರವಾದ ಮಾರ್ಗವನ್ನೂ ವರ್ಣನೆಯನ್ನೂ ನಿರೂಪಿಸಿದ. ಗುರುಲಿಂಗದೇವರ ವರ್ಣನೆಯ ಮಾತುಗಳನ್ನು ನೆನಪಿಗೆ ತಂದುಕೊಳ್ಳುತ್ತ ಅವುಗಳನ್ನು ಕೇಳುತ್ತಿದ್ದಳು, ಮಹಾದೇವಿ.

ಕದಳಿಯ ಕಲ್ಪನೆಯ ಲಿಂಗಮ್ಮ ತನ್ನ ವಚನಗಳಲ್ಲಿ ಸಾಂಕೇತಿಕವಾಗಿ ವಿವರಿಸಿದಳು. ಮಹಾದೇವಿಯೂ ಕದಳಿಯ ಅನೇಕ ಅರ್ಥಗಳನ್ನು ಹೇಳಿ, ತನ್ನ ಅಂತರಂಗದ ಕದಳಿಯ ಕಲ್ಪನೆಯನ್ನು ಮುಂದಿಡುತ್ತಾ ಈ ವಚನದಿಂದ ಅದನ್ನು ಪೂರ್ಣಗೊಳಿಸಿದಳು :

ಕದಳಿಯೆಂಬುದು ತನು, ಕದಳಿಯೆಂಬುದು ಮನ,

ಕದಳಿಯೆಂಬುದು ವಿಷಯಂಗಳು.

ಕದಳಿಯೆಂಬುದು ಭವಘೋರಾರಣ್ಯ.

ಕದಳಿಯೆಂಬುದ ಗೆದ್ದು ತವೆ ಬದುಕಿ ಬಂದು

ಕದಳಿಯ ಬನದಲ್ಲಿ ಭವಹರನ ಕಂಡೆನು.

ಭವಗೆಟ್ಟು ಬಂದ ಮಗಳೆಂದು ಕರುಣದಿಂದ ತೆಗೆದು,

ಬಿಗಿದಪ್ಪಿದರೆ ಚನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು

``ಹೌದು ಮಗಳೇ ! ಕದಳಿಯ ಅನೇಕ ಅರ್ಥಗಳನ್ನು ಚೆನ್ನಾಗಿ ಹೇಳಿದೆ. ತನು, ಮನ, ವಿಷಯ - ಈ ಎಲ್ಲ ಕದಳಿಗಳನ್ನೂ ದಾಟಿ ನೀನು ಮುಂದೆ ಹೋಗಿದ್ದೀಯ. ಕದಳಿಯ ಕರ್ಪುರವಾಗಿ ಪರಿಮಳದ ಬೆಳಗನ್ನು ಬೀರಿದ್ದೀಯ ಶರಣರೆಲ್ಲರ ಕಣ್ಮಣಿಯಾಗಿದ್ದ ನೀನು, ಇನ್ನು ಇಲ್ಲಿಂದ ಹೊರಟು, ಅವರೆಲ್ಲರ ಸಾಧನೆಯ ಸಂದೇಶವನ್ನು ಚನ್ನಮಲ್ಲಿಕಾರ್ಜುನನ ಹೃದಯ ಕಮಲದ ರಸರಂಗದಲ್ಲಿ ತೇಲಿಬಿಡು, ತಾಯಿ. ಹೇಳಿದಪ್ರಭುದೇವ; ಕಂಠತುಂಬಿಬಂದಿತ್ತು.