ಪುಟ:Kadaliya Karpoora.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦

ಕದಳಿಯ ಕರ್ಪೂರ

ಅಲ್ಲಿಗೆ ಹೋಗಬೇಕೆಂಬ ಕುತೂಹದಿಂದಲೇ ಕಾಯುತ್ತಿದ್ದಳು ಮಹಾದೇವಿ. ಆತನನ್ನು ಹಿಂಬಾಲಿಸಿದಳು.

ಮಲ್ಲಿಕಾರ್ಜುನನ ದೇವಾಲಯವಿರುವ ಪರ್ವತದ ಕಣಿವೆಯ ಆಳದಲ್ಲಿ ಹರಿಯುತ್ತಿದ್ದಾಳೆ ಕೃಷ್ಣೆ, ಆತನ ಪಾದವನ್ನು ತೊಳೆಯುವಂತೆ. ಪಾತಾಳದಲ್ಲಿಯೋ ಎಂಬಂತೆ ಹರಿಯುತ್ತಿರುವ ಆಕೆಯ ಹೆಸರು ಅಲ್ಲಿ ಪಾತಾಳಗಂಗೆಯೆಂದೇ ಪರಿಣಮಿಸಿದೆ.

ದೇವಾಲಯದ ಪೂರ್ವದಿಕ್ಕಿನಲ್ಲಿ ಸ್ವಲ್ಪ ದೂರ ನಡೆದಳು. ಮುಂದೆ ಅವಳನ್ನು ಪರ್ವತದಿಂದ ಕೆಳಕ್ಕೆ ಇಳಿಸಲು ಪ್ರಾರಂಭಿಸಿತು ಹಾವಿನಂತೆ ಸುತ್ತಿ ಸುತ್ತಿ ಕೆಳಗಿಳಿಯುತ್ತಿರುವ ಮೆಟ್ಟಲಿನ ಮಾರ್ಗ. ಆಗಲೇ ಜನರ ಪ್ರವಾಹ ಮೆಟ್ಟಿಲುಗಳನ್ನು ಇಳಿದು ಗಂಗೆಯೆಡೆಗೆ ಧಾವಿಸುತ್ತಿತ್ತು. ಬರುಬರುತ್ತಾ ಮೆಟ್ಟಿಲುಗಳು ಕಡಿದಾಗಿ ಒಂದೊಂದು ಹೆಜ್ಜೆಯೂ ಕೆಳಗೆ ಕೊಂಡೊಯ್ಯುತ್ತಿತ್ತು.

ಸ್ವಲ್ಪ ದೂರ ಇಳಿಯುವುದರೊಳಗೆ ಕೃಷ್ಣೆಯ ಸಲಿಲದೇಹ ಎಳೆಬಿಸಿಲಿನಲ್ಲಿ ಹೊಳೆಹೊಳೆದು ಗೋಚರಿಸಿತು. ಅದನ್ನು ಮುಟ್ಟಲು ತಾವು ಇನ್ನೂ ಇಳಿಯ ಬೇಕಾಗಿರುವ ಆಳವನ್ನು ಗಮನಿಸಿದ ಮಹಾದೇವಿಗೆ ಇದು ಪಾತಾಳಗಂಗೆಯೇ ಸರಿಯೆನಿಸಿತು.

ಕೆಳಗೆ ಇಳಿದು ಹೋದಂತೆಲ್ಲಾ ಎದುರಿಗೆ ಕಾಣುತ್ತಿದ್ದ ಪರ್ವತಗಳ ಎತ್ತರ ಹೆಚ್ಚುತ್ತಿತ್ತು. ಮೂರು ಪರ್ವತಗಳು ಸೇರುವ ಕಣಿವೆಯ ಆಳದಲ್ಲಿ ಸುತ್ತಿ ಸುತ್ತಿ ಕೃಷ್ಣೆ ಹರಿದು ಬರುತ್ತಿದ್ದಳು. ಕೆಳಗಿಳಿದು ಬಳಿಗೆ ಹೋದಾಗ ಅದುವರೆಗಿನ ಆಯಾಸವೆಲ್ಲಾ ಕ್ಷಣಮಾತ್ರದಲ್ಲಿ ಪರಿಹಾರವಾದಂತಾಯಿತು.

ತಲೆಯೆತ್ತಿ ನೋಡಿದರೆ ನೀಲವಾದ ಆಕಾಶ. ಆ ನೀಲಿಯ ಆಕಾಶಪಟವನ್ನು ಬಿಗಿದು ಕಟ್ಟಿರುವ ಕೂವೆಕಂಬಗಳಂತೆ ಪರ್ವತ ಶಿಖರಗಳು ; ಆ ಪಟ ವಸ್ತ್ರದ ಮೇಲೆ ಚಿನ್ನದ ಕಿರಣಗಳ ಕಸೂತಿಯನ್ನು ನೆಯ್ದಂತೆ ಹೊಂಗಿರಣಗಳಿಂದ ಅಲಂಕೃತವಾದ ಬಿಳಿಯ ಮೋಡಗಳ ಸಾಲುಗಳು. ಈ ಅಲಂಕಾರಕ್ಕೆಲ್ಲ ಚೈತನ್ಯದ ಕಣ್ಣು ಕೊಡುವಂತೆ ಮೇಲೇರಿ ಬರುತ್ತಿರುವ ದಿನಮಣಿ ಸೌಂದರ್ಯದ ವೈಭವದಲ್ಲಿಯೇ ಶಿವ ಅವಿರ್ಭವಿಸಿದಂತೆ ತೋರಿತು. ಸ್ನಾನ ಮಾಡಿದಳು ಮಹಾದೇವಿ. ಸೌಂದರ್ಯರೂಪಿ ಶಿವನ ಪೂಜೆಯಲ್ಲಿ ತಲ್ಲೀನಳಾಗಿ, ತನ್ನ ವಚನವನ್ನು ಹಾಡಿದಳು :

ವನವೆಲ್ಲಾ ನೀವೇ, ವನದೊಳಗಣ ದೇವತರುವೆಲ್ಲಾ ನೀವೇ

ತರುವಿನೊಳಗಾಡುವ ಖಗಮೃಗವೆಲ್ಲಾ ನೀವೇ