ಮಹಾದೇವಿ ಅಲ್ಲಿ ಇನ್ನೊಂದು ಪ್ರಕೃತಿ ನಿರ್ಮಿತವಾದ ಆಶ್ಚರ್ಯವನ್ನು ಕಂಡು ಮಾರುಹೋಗಿದ್ದಳು. ಹಳ್ಳದಿಂದ ಪೂರ್ವಕ್ಕಿರುವ ಬೆಟ್ಟವನ್ನು ಹತ್ತಿ ಉತ್ತರದ ಕಡೆಗೆ ಮೇಲೇರುತ್ತಾ ಸ್ವಲ್ಪ ದೂರ ಹೋಗುವುದರೊಳಗಾಗಿ ಪಶ್ಚಿಮದ ಕಡೆಯಿಂದ ಹಬ್ಬಿ ಬಂದಿರುವ ಬೆಟ್ಟವೂ ಅಲ್ಲಿ ಬಂದು ಸೇರುತ್ತಿತ್ತು. ಎರಡೂ ಬೆಟ್ಟಗಳೂ ಸೇರುವ ಆ ಮೂಲೆಯಲ್ಲಿ ಅತಿ ವಿಶಾಲವಾದ ಒಂದು ಗವಿ ಏರ್ಪಟ್ಟಿತ್ತು.
ಮಹಾದೇವಿ ಅದನ್ನು ಕಂಡೊಡನೆಯೇ ಆಶ್ಚರ್ಯ ಸಂತೋಷಗಳಿಂದ ಒಳಗೆ ನುಗ್ಗಿದಳು. ನೂರಾರು ಗಜಗಳಷ್ಟು ವಿಸ್ತಾರವಾಗಿತ್ತು ಆ ಗವಿ. ಸಂಪೂರ್ಣವಾಗಿ ನೋಡಬೇಕೆಂಬ ಕುತೂಹಲ ಹುಟ್ಟಿತು. ಗವಿಯ ಒಳಗೆ ಬಲಭಾಗದ ಕಡೆ ನಡೆಯತೊಡಗಿದಳು. ಸ್ವಲ್ಪ ದೂರ ಹೋಗುವುದರೊಳಗೆ ಪರ್ವತದ ಕಲ್ಲಗೋಡೆ ಅಡ್ಡ ಬಂದಿತು. ಆ ಭಾಗದ ಗವಿ ಅಲ್ಲಿಗೆ ಮುಗಿದಿತ್ತು. ಹಿಂದಕ್ಕೆ ಬಂದು ಮತ್ತೆ ಗವಿಯ ಎಡಗಡೆ ಹೊರಟಳು. ಮುಂದೆ ಹೋದಂತೆಲ್ಲಾ ಮಾರ್ಗ ಕಿರಿದಾಗುತ್ತಾ ಹೋಗುತ್ತಿತ್ತು. ಅನಂತರ ಅದು ಬಲಕ್ಕೆ ತಿರುಗಿತು. ಗಾಳಿ ಬೆಳಕು ಕಡಮೆಯಾಗುತ್ತಾ ಉಸಿರು ಕಟ್ಟುತ್ತಿತ್ತು. ಕಣ್ಣಿಗೆ ಕತ್ತಲೆ ಆವರಿಸುತ್ತಿತ್ತು. ಧೈರ್ಯ ಮಾಡಿ ಮುಂದೆ ನಡೆದಳು. ಸ್ವಲ್ಪ ದೂರ ಹೋದಮೇಲೆ ಮತ್ತೆ ಎಡಕ್ಕೆ ತಿರುಗಿತು ಮಾರ್ಗ. ಕೊನೆಗೆ ಇನ್ನೂ ಇಕ್ಕಟ್ಟಾಗುತ್ತಾ ಒಬ್ಬರು ಮಾತ್ರ ಕಷ್ಟದಿಂದ ಹೋಗಬಹುದಾದಷ್ಟು ಕಿರಿದಾಗಿ ಕೊನೆಗೊಂಡಿತ್ತು. ಅಲ್ಲಿ ಒಬ್ಬರು ಕುಳಿತು ಕೊಳ್ಳುವಂತಹ ಚಿಕ್ಕ ವೇದಿಕೆಯೊಂದು ಮಬ್ಬು ಬೆಳಕಿನಲ್ಲಿ ಗೋಚರಿಸಿದಂತಾಯಿತು.
ಹೆಚ್ಚುಕಾಲ ಅಲ್ಲಿರಲು ಆಗಲಿಲ್ಲ, ಹೊರಗೆ ಬಂದು ನೀಳವಾಗಿ ಉಸಿರೆಳೆದು ಹೊರಗಿನ ಪರಿಶುದ್ಧ ಗಾಳಿಯನ್ನು ಸೇವಿಸಿದಳು. ಗವಿಯ ರಚನೆ ಮಹಾದೇವಿಯ ಮನಸ್ಸನ್ನು ಸೆಳೆದಿತ್ತು. ಗವಿಯ ಕತ್ತಲೆಯ ಆ ಕೊನೆಯ ಭಾಗದಲ್ಲಿ ಇದ್ದ ವೇದಿಗೆ ಇನ್ನೂ ಆಶ್ಚರ್ಯವನ್ನುಂಟುಮಾಡಿತ್ತು. ಅನುಷ್ಠಾನಕ್ಕೆ ಕುಳಿತುಕೊಳ್ಳುವುದಕ್ಕಂತೂ ಅದು ಯೋಗ್ಯವಾದ ಸ್ಥಳವಾಗಿರಲಿಲ್ಲ.
ಆದರೆ ಗವಿಯ ಮುಂಭಾಗ ತುಂಬಾ ಸುಂದರವಾಗಿತ್ತು. ಭವ್ಯತೆಯ ಅನುಭವವನ್ನು ತಂದುಕೊಡುವಂತಿತ್ತು. ಪರ್ವತಗಳ ಬಂಡೆಗಳು ಚಿತ್ರವಿಚಿತ್ರವಾದ ಆಕಾರವನ್ನು ನಿರ್ಮಿಸಿ, ಗವಿಯ ಮಹಾದ್ವಾರಕ್ಕೆ ಸಹಜವಾದ ಕಲೆಯ ತೋರಣವನ್ನು ಕಟ್ಟಿದ್ದುವು.
ಗವಿಯ ಮುಂದುಗಡೆ ಕುಳಿತರೆ ಕೆಳಗಡೆ ಬಗ್ಗುವಾಗು ಹರಿಯುವುದು ಕಾಣುತ್ತಿತ್ತು. ಪರ್ವತವನ್ನು ಸುತ್ತಿಸುತ್ತಿ ಬರುತ್ತಿರುವ ಆ ಚಿಕ್ಕ ಹಳ್ಳ, ಆ ಎತ್ತರದಲ್ಲಿ ನಿಂತು ನೋಡಿದರೆ ಬಹಳ ದೂರದಿಂದಲೂ ತನ್ನ ದೀರ್ಘದೇಹವನ್ನು ಕಣ್ಣಿಗೆ