ಪುಟ:Kadaliya Karpoora.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೬೭

ಕತ್ತಲುಕೋಣೆಯಲ್ಲಿ, ಅರುಣೋದಯವನ್ನುಂಟುಮಾಡುವಂತೆ ಮಿನುಗುತ್ತಿದ್ದುವು ಮಹಾದೇವಿಯ ಕಣ್ಣುಗಳು.

ಮಹಾದೇವಿ ಮುಗುಳುನಗುತ್ತಾ ಲೀಲೆಗೋಸುಗವೋ ಎಂಬಂತೆ ತನ್ನ ದೃಷ್ಟಿಯನ್ನು ಅಡಗಿಸಿಕೊಂಡು ರಸವಂತಿಯತ್ತ ತಿರುಗಿದಳು. ರಸವಂತಿ ಹೇಳತೊಡಗಿದಳು.

“ಹೌದು ತಾಯಿ, ಮಹಾರಾಜರು ಈಗ ಶಿವಭಕ್ತರಾಗಿದ್ದಾರೆ. ರಾಜ್ಯವನ್ನು ತ್ಯಜಿಸಿ ನಿಮಗಾಗಿ ದೇಶದೇಶಗಳನ್ನು ಸುತ್ತಿಕೊಂಡು ಹೊರಟರು. ನಿಮ್ಮ ಅಪ್ಪಣೆಯಂತೆ ಅವರ ರಕ್ಷಣೆಯ ಭಾರವನ್ನು, ಅವರು ಬೇಡವೆಂದರೂ ಬಲಾತ್ಕಾರವಾಗಿ, ನಾನು ವಹಿಸಿಕೊಂಡು ಅವರ ಹಿಂದೆಯೇ ನಡೆದೆ. ಕಲ್ಯಾಣಪಟ್ಟಣದ ಕಡೆಗೆ ನೀವು ಹೋದುದನ್ನು ಕೇಳಿ ಅಲ್ಲಿಗೆ ಹೋದೆವು. ಅಲ್ಲಿ ನಿಮ್ಮನ್ನು ಕಾಣಬಹುದೆಂದು ನನ್ನ ಹೃದಯ ನಲಿವಿನಿಂದ ಉಕ್ಕುತ್ತಿತ್ತು. ಆದರೆ ಊರ ಸಮೀಪಕ್ಕೆ ಬರುತ್ತಿದ್ದಂತೆಯೇ ನಮಗೆ ತಿಳಿಯಿತು. ನೀವು ಕಲ್ಯಾಣವನ್ನು ಬಿಟ್ಟು ಶ್ರೀಶೈಲದತ್ತ ನಡೆದಿರೆಂಬುದು. ಕಲ್ಯಾಣವನ್ನು ಪ್ರವೇಶಿಸಲೇ ಇಲ್ಲ. ಹಾಗೆಯೇ ತಿರುಗಿದೆವು ಶ್ರೀಶೈಲದ ಕಡೆಗೆ. ಆದರೆ ಮಹಾರಾಜರು ಮಾರ್ಗದಲ್ಲಿ ಬಹಳ ಕಾಯಿಲೆ ಬಿದ್ದರು. ಅದರಿಂದ ಚೇತರಿಸಿಕೊಂಡು ಹೇಗೋ ಶ್ರೀಶೈಲವನ್ನು ಸಮೀಪಿಸಿದೆವು. ಆತ್ಮಕೂರಿಗೆ ಬರುವ ವೇಳೆಗೆ, ಶಿವರಾತ್ರಿಯನ್ನು ಮುಗಿಸಿಕೊಂಡು ಬಂದ ಶ್ರೀಶೈಲದ ಪರಿಷೆ ಅಲ್ಲಿ ಸಿಕ್ಕಿತು. ಅದರಿಂದ ತಿಳಿಯಿತು ನೀವು ಶ್ರೀಶೈಲದಲ್ಲಿದ್ದುದು. ಅಲ್ಲಿಗೆ ನಾವು ಬರುವ ವೇಳೆಗೆ ನೀವು ಇಲ್ಲಿಗೆ ಬಂದಿದ್ದೀರಿ, ಈ ಚುಂಚರು ನಮ್ಮನ್ನು ಇಲ್ಲಿಗೆ ಕರೆದು ತಂದರು. ಅಂತೂ ತಮ್ಮ ದರ್ಶನ ಇಲ್ಲಿ ನಮಗೆ ಲಭಿಸಿತು.”

ಮಾತನ್ನು ಮುಗಿಸಿದಳು ರಸಮಂತಿ. ಕೌಶಿಕ ಹೇಳಿದ.

“ಹೌದು, ಇದು ನಮ್ಮ ಯಾತ್ರೆಯ ಕಥೆ. ಈ ಪ್ರಯಾಣದಲ್ಲಿ ರಸವಂತಿ ತಾಯಿಯ ಹಾಗೆ ಕಾಪಾಡಿದ್ದಾಳೆ. ಅವಳಿಲ್ಲದಿದ್ದರೆ ಬಹುಶಃ ನಿನ್ನನ್ನು ನಾನು ಇನ್ನೊಮ್ಮೆ ಈ ಜನ್ಮದಲ್ಲಿ ಕಾಣುತ್ತಿರಲಿಲ್ಲ.”

ಮಹಾದೇವಿ ಹೇಳಿದಳು :

“ಹೀಗೆ ನೀವು ರಾಜ್ಯವನ್ನು ತ್ಯಜಿಸಿ, ನಿಮ್ಮ ಕರ್ತವ್ಯವನ್ನು ಮರೆತು, ಇಷ್ಟೊಂದು ಕಷ್ಟಪಟ್ಟು ನನ್ನನ್ನು ಹುಡುಕಿಕೊಂಡು ಅಲೆಯುವ ಅಗತ್ಯವೇನಿತ್ತು. ಕೌಶಿಕ ಮಹಾರಾಜ?”