ಆ ಮಾರ್ಗದಲ್ಲಿ ಅವರಿಬ್ಬರೂ ಮಗ್ನರಾದುದನ್ನು ಕಂಡು ಮಹಾದೇವಿಯ ಮನಸ್ಸು ನೆಮ್ಮದಿಯಿಂದ ನಲಿಯಿತು. ತನ್ನ ಸಂಪರ್ಕದಿಂದ ಅವರ ಜೀವ ದುಃಖಮಯವಾಗದೆ ವಿಕಾಸದ ದಿವ್ಯಮಾರ್ಗದತ್ತ ತಿರುಗಿದುದಕ್ಕಾಗಿ, ತನ್ನ ಕರ್ತವ್ಯದ ಕೊನೆಯ ಹೊಣೆಯನ್ನು ನಿರ್ವಹಿಸಿದ ತೃಪ್ತಿ ಅವಳಿಗೆ ಉಂಟಾಯಿತು.
ಕೊನೆಗೊಂಡು ದಿನ ಮಹಾದೇವಿ ಕದಳಿಯ ವನಕ್ಕೆ ಹೊರಟು ನಿಂತಳು. ಜೊತೆಯಲ್ಲಿಯೇ ರಸವಂತಿ ಕೌಶಿಕರು ಸಿದ್ಧರಾದರು. ಆದರೆ ಮಹಾದೇವಿ ತಾನೊಬ್ಬಳೇ ಕದಳಿಯಲ್ಲಿರಬೇಕೆಂಬ ತನ್ನ ಮನೋಭಿಲಾಷೆಯನ್ನು ತಿಳಿಸಿದಳು. ಅದಕ್ಕೆ ರಸವಂತಿ :
“ಆಗಲಿ ತಾಯಿ, ನಾವು ಈಗ ನಿಮ್ಮ ಜೊತೆ ಬಂದು ಕದಳಿಯನ್ನು ನೋಡಿಕೊಂಡು ಮತ್ತೆ ಕೆಳಗೆ ಬಂದುಬಿಡುತ್ತೇವೆ. ನೀವೊಬ್ಬರೇ ಕೆಲವು ದಿವ ಅಲ್ಲಿರಬಹುದು. ಆಗಾಗ ನಾವು ಮೇಲೇರಿ ನಿಮ್ಮನ್ನು ನೋಡುವುದಕ್ಕೂ ಅನುಕೂಲವಾಗುತ್ತದೆ.”
ಅವರ ಆಸೆಗೆ ಅಡ್ಡಿಯನ್ನುಂಟುಮಾಡುವ ಮನಸ್ಸಾಗಲಿಲ್ಲ ಮಹಾದೇವಿಗೆ.
ತ್ರಿಕೂಟಪರ್ವತನ್ನು ಏರತೊಡಗಿದರು. ಇಬ್ಬರು ಚುಂಚರು ಮಾರ್ಗದರ್ಶಕರಾಗಿ ಮುಂದೆ ಮುಂದೆ ನಡೆಯುತ್ತಿದ್ದರು.
ತ್ರಿಕೂಟಪರ್ವತ, ಅಕ್ಕನ ಹಳ್ಳದಿಂದ ಪಶ್ಚಿಮಕ್ಕೆ ಹೊರಟು ಮೇಲೆ ಏರುತ್ತಾ ಹೋದಂತೆ ದಕ್ಷಿಣದ ಕಡೆಗೆ ಹಾವಿನಂತೆ ಮುಂದುವರಿಯುತ್ತಿತ್ತು. ಪರ್ವತವನ್ನು ಏರತೊಡಗಿದ ಸ್ವಲ್ಪಹೊತ್ತಿನಲ್ಲಿಯೇ ಕೃಷ್ಣಾನದಿಯ ದೀರ್ಘ ದೇಹ ಕಣ್ಣಿಗೆ ಬೀಳತೊಡಗಿತು. ದಕ್ಷಿಣದ ಕಡೆಯಿಂದ ಬಂದುಬಾಗಿ ಚುಕ್ಕಲ ಪರ್ವತವನ್ನು ಅರ್ಧಚಂದ್ರಾಕಾರದಲ್ಲಿ ಸುತ್ತಿಹೋಗಿರುವ ಕೃಷ್ಣೆಯ ದಂಡೆಯನ್ನೇ ಆಶ್ರಯಿಸಿ. ಆ ನದಿಯ ಪ್ರವಾಹದ ಮೇಲ್ಮುಖದ ಕಡೆಗೆ ಮೇಲೆ ಮೇಲೆ ಏರುತ್ತಿತ್ತು ತ್ರಿಕೂಟ.
ತ್ರಿಕೂಟದ ಪರ್ವತವೆಂದು ಇದಕ್ಕೆ ಹೆಸರು ಬರಲು ಕಾರಣವಾದ ಮೂರು ಕೂಟಗಳಾವುದೆಂದು ಮಹಾದೇವಿ ಸುತ್ತಲೂ ಇದ್ದ ಪರ್ವತಶಿಖರಗಳನ್ನು ಹುಡುಕ ತೊಡಗಿದಳು. ‘ಯಾವ ಯಾವ ಪರ್ವತದ ಮೂಗು ಶಿಖರಗಳನ್ನು ಗಮನಿಸಿ ತ್ರಿಕೂಟ ಪರ್ವತವೆಂದು ಕರೆದಿರಬಹುದು?' ಎಂದು ಆಲೋಚಿಸುತ್ತಿದ್ದಳು.
ಅಷ್ಟರಲ್ಲಿ ಏರುತ್ತಿದ್ದ ಪರ್ವತದ ಕಡಿದಾದ ದಾರಿ ಮುಗಿದು ಮಟ್ಟಸವಾದ ನೆಲದಲ್ಲಿ ನಡೆಯುತ್ತಿದ್ದರು. ಎತ್ತರವಾಗಿ ಬೆಳೆದು ನಿಂತ ಒಣಗಿದ ಹುಲ್ಲನ್ನು ತುಳಿದು ಕೊಂಡು ಕಲ್ಲಿನಿಂದ ಕಲ್ಲಿಗೆ ನೆಗೆಯುತ್ತಾ ಕಷ್ಟದಿಂದ