"ಇಲ್ಲ... ಲೌಕಿಕಕ್ಕೆ ಒಬ್ಬ ಪತಿ, ಪಾರಮಾರ್ಥಕ್ಕೆ ಒಬ್ಬ ಪತಿ - ಇದು ನನ್ನ ಮನಸ್ಸಿಗೆ ಹಿಡಿಸದು. ನನ್ನ ಎಲ್ಲ ಪ್ರೇಮವನ್ನೂ ಒಬ್ಬ ಪತಿಗೇ ಧಾರೆಯೆರೆದಿದ್ದೇನೆ. ಇನ್ನಾರನ್ನೂ ನಾನು ಮದುವೆಯಾಗಲಾರೆ.”
"ಹಾಗೆಲ್ಲ ಹೇಳಬೇಡ. ನಿನ್ನ ಒಳ್ಳೆಯದಕ್ಕೆ ನಾವು ಹೇಳುವುದು. ನೀನಿನ್ನೂ ಲೋಕಾನುಭವವಿಲ್ಲದವಳು. ಈ ಭಾವನೆಯ ಆವೇಶದಿಂದಲೇ ಇಡೀ ಜೀವಮಾನವನ್ನೆಲ್ಲಾ ಸಾಗಿಸುವುದು ಸಾಧ್ಯವೇ ? ಹೆಣ್ಣು ಮದುವೆಯಾಗದೇ ಇರುವುದುಂಟೇ ? ಮದುವೆಯಾಗಿಯೂ ಸ್ತ್ರೀಯರು ಆದರ್ಶ ಭಕ್ತೆಯರಾಗಿ ಜೀವನದ ಸಾರ್ಥಕತೆಯನ್ನು ಪಡೆದಿಲ್ಲವೇ ? ಗುರುಗಳನ್ನು ಬೇಕಾದರೆ ಕೇಳು.”
ಮಾತನ್ನೇನೂ ಆಡದೆ ಮಹಾದೇವಿ ತನ್ನ ಕೋಣೆಯತ್ತ ನಡೆದಳು.
ಆತಂಕ ಉದ್ವೇಗಗಳಿಂದ ಅವಳ ಮನಸ್ಸು ತಳಮಳಗೊಂಡಿತ್ತು. ಒಂದಲ್ಲ ಒಂದು ದಿನ ಇಂತಹ ಸನ್ನಿವೇಶವನ್ನು ಎದುರಿಸಬೇಕಾಗಬಹುದೆಂದು ಆಕೆ ನಿರೀಕ್ಷಿಸಿಯೇ ಇದ್ದಳು. ಅದನ್ನು ಸಾಧ್ಯವಾದಷ್ಟು ಮುಂದೆ ತಳ್ಳುತ್ತಾ ಬಂದಿದ್ದಳು. ಅದರಿಂದ ಪಾರಾಗುವುದು ಹೇಗೆಂಬುದು ಮಾತ್ರ ಆಕೆಗೆ ಬಗೆಹರಿಯದ ಸಮಸ್ಯೆಯಾಗಿತ್ತು. ಇಂದು ಆ ಸಮಸ್ಯೆ ಉತ್ಕಟ ಸ್ವರೂಪವನ್ನು ತಳೆದು ನಿಂತಿತ್ತು.
`ಈಗ ತಂದೆತಾಯಿಗಳು ದೃಢನಿರ್ಧಾರದಿಂದ ಹೊರಟಿದ್ದಾರೆ. ಅವರ ದೃಷ್ಟಿಯಿಂದ ಅದು ಸಹಜವಾದುದೂ ಹೌದು. ಜನಾಪವಾದವನ್ನು ಸಹಿಸಿಕೊಂಡು ಇಷ್ಟು ದಿನಗಳವರೆಗೂ ಅವರು ಸುಮ್ಮನಿದ್ದುದೇ ಹೆಚ್ಚು. ನನ್ನ ಮೇಲಿನ ಮಮತೆ ಅವರನ್ನು ಹಾಗೇ ನಿಲ್ಲಿಸಿತು. ಆದರೆ ಇಂದು ಮಮತೆಯನ್ನು ಮೀರಿದ ಕರ್ತವ್ಯದ ಕರೆ ಅವರಲ್ಲಿ ಜಾಗೃತವಾಗಿದೆ. ಅದರಲ್ಲಿ ನಾನು ತಪ್ಪನ್ನು ಎಣಿಸಲಾರೆ... ಆದರೆ ಅದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ?'
`ಗುರುಗಳನ್ನು ಕೇಳಿಯೇ ತಂದೆ ಈ ಏರ್ಪಾಡನ್ನು ಮಾಡಿದರಂತೆ ! ಗುರುಗಳು ಏನು ಹೇಳಿರಬಹುದು. ಈ ಮದುವೆಯ ಪ್ರಯತ್ನವನ್ನು ಕೈಬಿಡಿ ಎಂದು ಹೇಳಬಾರದಿತ್ತೇ...' ಹೀಗೆ ಹರಿಯುವುದು ಮಹಾದೇವಿಯ ಮನಸ್ಸು.
ವಾಸ್ತವವಾಗಿ ಓಂಕಾರ ಗುರುಗಳ ಬಳಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದಾಗ ಅವರೆಂದಿದ್ದರು :
"ನಿಜ, ಓಂಕಾರ. ನಿಮ್ಮ ಆತಂಕ ಸಹಜವಾದುದು. ಇಷ್ಟು ದಿನ ನೀನು ತಡೆದುದೇ ಹೆಚ್ಚೆಂದು ಹೇಳಬೇಕು. ಹೆಣ್ಣುಮಕ್ಕಳೆಂದರೆ ಮದುವೆಗಾಗಿಯೇ ಹುಟ್ಟಿದವರೆಂದು ಭಾವಿಸಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯನ್ನು ಮಾಡಿಬಿಡುವ ಈ ರೂಢಿಯಲ್ಲಿ, ನೀನು ಇದುವರೆಗೂ ಮಗಳ