ಪುಟ:Kadaliya Karpoora.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

``ಆ ಸಂದೇಶವೇನಿರಬಹುದು! ಶ್ರೀಶೈಲ ಹೇಗಿದ್ದಿರಬಹುದು! ಅಲ್ಲಿ ಮಲ್ಲಿಕಾರ್ಜುನ ಎಂತಿರುವನೋ! ಆತನನ್ನು ಕಂಡು ಬಂದ ಗುರುಗಳನ್ನು ಯಾವಾಗ ನೋಡಿಯೇನು!’- ಈ ಭಾವನೆಗಳಿಂದ ಅವಳ ಉದ್ವೇಗ ಉಕ್ಕೇರುತ್ತಿತ್ತು.

ಅಷ್ಟರಲ್ಲಿ “ಓಂಕಾರಶೆಟ್ಟರೇ” ಎಂದು ಕೂಗುತ್ತಾ ಗುರುಪಾದಪ್ಪನೇ ಒಳಗೆ ಬಂದ. ಗುರುಗಳನ್ನೇ ಕಂಡಷ್ಟು ಸಂತೋಷವಾಯಿತು ಮಹಾದೇವಿಗೆ, ಅವರ ಬಳಿಯಿಂದ ಬಂದಿರುವ ಗುರುಪಾದಪ್ಪನನ್ನು ಕಂಡು.

ಅಷ್ಟರಲ್ಲಿ ಮಹಡಿಯ ಮೇಲಿಂದ ಓಂಕಾರಶೆಟ್ಟಿ ಕೆಳಗೆ ಬರುತ್ತಾ, “ಬಾ ಗುರುಪಾದಪ್ಪ” ಎಂದು ಸ್ವಾಗತಿಸಿದ. ಮತ್ತು ಕೇಳಿದ: “ಗುರುಗಳು ಬಂದರಂತೆ?”

ಆ ವೇಳೆಗೆ ಲಿಂಗಮ್ಮ ಮಹಾದೇವಿಯರೂ ಬಂದು ನಿಂತಿದ್ದರು.

“ಹೌದು, ನಿನ್ನೆ ರಾತ್ರಿ ಬಂದರು” ಹೇಳತೊಡಗಿದ ಗುರುಪಾದಪ್ಪ, “ನಾನು ಮಠದ ಕೆಲಸವನ್ನೆಲ್ಲಾ ಮುಗಿಸಿ ನಿತ್ಯದಂತೆ ದಾಸೋಹದ ವಿಭಾಗ, ಶಾಲೆಯ ವಿಭಾಗ ಎಲ್ಲವನ್ನೂ ನೋಡಿಕೊಂಡು ಇನ್ನೇನು ಮಲಗುವುದರಲ್ಲಿದ್ದೆ. ಆಗ ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷವಾದರು ಗುರುಗಳು. ಮಠದಲ್ಲೆಲ್ಲ ಸುದ್ದಿ ಹರಡಿತು. ಸಂತೋಷ ಸಂಭ್ರಮಗಳ ಕೋಲಾಹಲದಿಂದ ತುಂಬಿಹೋಯಿತು ಮಠ, ರಾತ್ರಿಯೆಲ್ಲಾ ಕೀರ್ತನೆ ಭಜನೆ ಇವುಗಳಲ್ಲಿಯೇ ಬಹುಕಾಲ ಕಳೆದುಹೋಯಿತು.”

ಕೇಳುತ್ತಾ ನಿಂತಿದ್ದ ಮಹಾದೇವಿಯ ಮೈ ಪುಲಕಿತವಾದಂತಾಯಿತು. ಆ ದೃಶ್ಯವನ್ನೂಹಿಸಿಕೊಂಡು ತಡೆಯಲಾರದೆ ಕೇಳಿದಳು:

“ಆಗಲೇ ನಮಗೇಕೆ ಬಂದು ಹೇಳಲಿಲ್ಲ ಅದನ್ನು?” ಗುರುಪಾದಪ್ಪನನ್ನು ಆಕ್ಷೇಪಿಸುವ ಧ್ವನಿಯಿತ್ತು ಅದರಲ್ಲಿ.

“ನೋಡಿದಿರಾ ನಿಮ್ಮ ಮಗಳ ಆಕ್ಷೇಪಣೆ. ನೀನು ನಿಜವಾಗಿಯೂ ಮಹಾ ದೇವಿಯೇ ಕಣಮ್ಮ” ಎಂದು ನಕ್ಕ ಗುರುಪಾದಪ್ಪ.

“ಅಷ್ಟು ಹೊತ್ತಿನಲ್ಲಿ ಹೇಳಿದ್ದರೂ ನೀನೇನು ಹೋಗುತ್ತಿದ್ದೆಯಾ? ಈಗ ಹೋಗೋಣಂತೆ, ಸುಮ್ಮನಿರು.”

ತಾಯಿ ಗುರುಪಾದಪ್ಪನ ಪರವಹಿಸಿದಳು.

ಅಷ್ಟರಲ್ಲಿ ಗುರುಪಾದಪ್ಪನೇ ಹೇಳಿದ:

“ಇಲ್ಲಮ್ಮಾ, ಈ ಮಹಾದೇವಿಯನ್ನು ನೋಡುವುದಕ್ಕಾಗಿ ಈಗ ಗುರುಗಳೇ ಇಲ್ಲಿಗೆ ಬರುತ್ತಾರೆ. ಶೆಟ್ಟರೇ, ಆ ಮುಖ್ಯ ವಿಷಯವನ್ನು ಹೇಳುವುದಕ್ಕೇ ನಾನು ಈಗ ಇಲ್ಲಿಗೆ ಬಂದದ್ದು. ಗುರುಗಳು ಹೇಳಿ ಕಳುಹಿಸಿದ್ದಾರೆ. ಈ ದಿನ ಪ್ರಸಾದವನ್ನು ಸ್ವೀಕರಿಸಲು ನಿಮ್ಮಲ್ಲಿಗೆ ಬರುತ್ತಾರಂತೆ ಗುರುಗಳು.