ಇರಲಿ ಬಿಡಿ, ಬಂಗಾರಮ್ಮನವರೇ; ಅವರಿಗೆ ಏನು ಸಮಸ್ಯೆಯೋ ಏನೋ. ಇಂದಲ್ಲ ನಾಳೆ ಮದುವೆ ಮಾಡಿಯಾರು. ಹೇಗೋ ಸಹಿಸಿಕೊಳ್ಳಬೇಕು... ಎಲ್ಲರ ಮನೆಯ ದೋಸೆಯೂ ತೂತೇ...
ಇಲ್ಲದ ಯಾವುದೋ ಅರ್ಥವನ್ನು ಮಹಾದೇವಿಯ ಮದುವೆಯ ವಿಚಾರದಲ್ಲಿ ಕಲ್ಪಿಸಲು ಪ್ರಯತ್ನಿಸಿದಳು. ಇದನ್ನು ಕೇಳಿ ಮಹಾದೇವಿ ಜುಗುಪ್ಸೆಯಿಂದ:
ನೀವು ದೊಡ್ಡವರು, ನಂಜಮ್ಮ. ಇನ್ನೊಬ್ಬರ ಮನೆಯ ದೋಸೆಯ ತೂತುಗಳನ್ನು ಎಣಿಸುವುದಕ್ಕೆ ಮೊದಲು, ನಿಮ್ಮ ಮನೆಯ ದೋಸೆಯ ಹೆಂಚೇ ತೂತು ಬಿದ್ದಿರುವುದನ್ನು ಮುಚ್ಚಲು ಪ್ರಯತ್ನಿಸಿ.
ಮಹಾದೇವಿಯ ಸಾತ್ವಿಕ ದಿಟ್ಟತನದ ಮುಂದೆ, ಕುಹಕಹೃದಯಿಗಳ ಬಾಯಿ ಕಟ್ಟಿಹೋಗಿತ್ತು. ಅಷ್ಟರಲ್ಲಿ ಕಲ್ಯಾಣಮ್ಮನೇ ಅವರ ಸಹಾಯಕ್ಕೆ ಬಂದಳು.
'ಬಾ ಮಹಾದೇವಮ್ಮ, ಹೋಗಲಿ ಬಾ, ಈಗ ಹೋಗೋಣ... ಎಂದು ಮಹಾದೇವಿಯನ್ನೊಳಗೊಂಡು ರಸ್ತೆಯನ್ನು ಸೇರಿದಳು. ನೊಂದ ಮನಸ್ಸಿನಿಂದ ಮಹಾದೇವಿ ನಡೆಯತೊಡಗಿದ್ದಳು. ಹೆಣ್ಣುಜಾತಿಯ ದೌರ್ಬಲ್ಯವೇ ಹೆಣ್ಣಿನ ಅಧೋಗತಿಗೆ ಕಾರಣವೆಂಬ ಗುರುಗಳ ಮಾತು ಅವಳ ಮನಸ್ಸಿನ ಮುಂದೆ ಸುಳಿಯಿತು. ಆದರೂ ಅಲ್ಲಲ್ಲಿ ಕಾಣುವ ಕಲ್ಯಾಣಮ್ಮನಂತಹವರಿಂದ ಹೆಣ್ಣಿನ ಗೌರವ ಉಳಿಯಬೇಕಾಗಿದೆಯೆಂದೆನಿಸಿತು ಆಕೆಗೆ.
ಇದೇ ಆಲೋಚನೆಯಲ್ಲಿಯೇ ನಡೆದಿದ್ದಳು. ಅಷ್ಟರಲ್ಲಿ ಹಿಂದಿನಿಂದ ಕುದುರೆಗಳ ಖುರಪುಟ ಧ್ವನಿ ಕೇಳಿಸಿತು. ತಿರುಗಿ ನೋಡಿದಳು. ನಾಲ್ಕಾರು ಜನ ರಾಜ ಸವಾರರು ಕುದುರೆಗಳನ್ನೇರಿ ಬರುತ್ತಿದ್ದುದು ಕಣ್ಣಿಗೆ ಬಿತ್ತು. ಇಬ್ಬರೂ ರಸ್ತೆಯ ಪಕ್ಕಕ್ಕೆ ಬಂತು ನಿಂತರು. ಕುದುರೆಗಳು ಅವರನ್ನು ದಾಟಿ ಮುಂದೆ ಹೋದವು.
ಇದೇನೋ ಅಮ್ಮ. ಈಗೊಂದೆರೆಡು ದಿನಗಳಿಂದ ಹೀಗೆ ರಾಜಸೈನಿಕರ ಓಡಾಟ ಹೆಚ್ಚಿದೆಯಲ್ಲ. ಮತ್ತೇನು ಯುದ್ಧವೋ ಏನೋ! ತನ್ನ ಕುತೂಹಲವನ್ನು ವ್ಯಕ್ತಪಡಿಸಿದಳು ಕಲ್ಯಾಣಮ್ಮ.
ಇಲ್ಲ ಕಲ್ಯಾಣಮ್ಮ, ನಾನು ಕುತೂಹಲದಿಂದ ಅಪ್ಪನನ್ನು ಕೇಳಿದೆ. ಇನ್ನೊಂದೆರಡು ದಿನಗಳಲ್ಲಿ ಅದೇನೋ ವೈಹಾಳಿಯಂತೆ ರಾಜನದು. ಅದರ ಸಿದ್ಧತೆಯಲ್ಲಿ ತೊಡಗಿದ್ದಾರೆ.