“ವೈಹಾಳಿ ! ಹಾಗೆಂದರೇನು ಮಹಾದೇವಿ?” ಕಲ್ಯಾಣಮ್ಮ ಕೇಳಿದಳು.
“ಊರ ಮುಂದೆ ವಿಸ್ತಾರವಾದ ಬಯಲಿದೆಯಲ್ಲ , ಮಠದಿಂದಲೂ ಆಚೆ ; ಅಲ್ಲಿ ರಾಜನ ಕುದುರೆ ಸವಾರಿಯಂತೆ ! ಹೊಸ ಕುದುರೆಗಳು ಬಂದಿವೆಯಂತೆ. ಅವುಗಳನ್ನೇರಿ ಸವಾರಿ ಮಾಡುವುದು. ಆ ವಿನೋದಕ್ಕೆ ವೈಹಾಳಿ ಎಂದು ಕರೆಯುತ್ತಾರಂತೆ.” ಮಹಾದೇವಿ ತನಗೆ ತಿಳಿದುದನ್ನು ಹೇಳಿದಳು.
ಹೀಗೆ ಮಾತನಾಡುತ್ತಾ ನಡೆಯುತ್ತಿರುವಷ್ಟರಲ್ಲಿ ಕಲ್ಯಾಣಮ್ಮ ತನ್ನ ಮನೆಯ ಕಡೆ ತಿರುಗುವ ರಸ್ತೆ ಬಂದಿತು. ಮಹಾದೇವಿಯಿಂದ ಬೀಳ್ಕೊಳ್ಳುವ ಮುನ್ನ ಕಲ್ಯಾಣಮ್ಮ ಹೇಳಿದಳು :
“ಮಹಾದೇವಮ್ಮ, ಬಾವಿಯ ಕಟ್ಟೆಯ ಬಳಿ ನಡೆದುದನ್ನು ಮರೆತು ಬಿಡಮ್ಮ. ಆ ಜನಗಳೇ ಹಾಗೆ. ಬಾಯಿ ಹಿಡಿತವಿಲ್ಲದ ಜನ...”
“ಇರಲಿ ಬಿಡಿ, ಕಲ್ಯಾಣಮ್ಮನವರೇ. ಅದಕ್ಕೆಲ್ಲಾ ನಾನು ಅಂಜುವವಳಲ್ಲ. ಜಗತ್ತಿನಲ್ಲಿ ಬರೀ ಅಂತಹವರೇ ಇಲ್ಲವಲ್ಲ. ನಿಮ್ಮಂತಹವರೂ ಇದ್ದಾರೆ. ಅದನ್ನೇನೂ ಯೋಚಿಸಬೇಡಿ. ನಾನದೆಲ್ಲವನ್ನೂ ಸಹಿಸಿಕೊಳ್ಳಬಲ್ಲೆ” ಎಂದು ಸಮಾಧಾನಪಡಿಸಿ ಮುಂದೆ ನಡೆದಳು. ಅದೇ ಆಲೋಚನೆ ಮನಸ್ಸಿನಲ್ಲಿ ಸುತ್ತುತ್ತಿತ್ತು.
“ಅವರ ಮನಸ್ಸಿನ ಮಟ್ಟವೇ ಅಷ್ಟು. ಅದಕ್ಕಿಂತ ಹೆಚ್ಚು ಅವರು ಆಲೋಚಿಸಲಾರರು. ಅವರ ಮೇಲೇಕೆ ಕೋಪ !” ಎಂದು ಮನಸ್ಸು ಒಂದು ಕಡೆ ಸಹಾನುಭೂತಿಯನ್ನು ಮಿಡಿಯುತ್ತಿತ್ತು.
'ತಮ್ಮ ಮನಸ್ಸಿನ ಅಷ್ಟೇ ಮಟ್ಟವನ್ನಿಟ್ಟುಕೊಂಡು, ತಮ್ಮ ಪಾಡಿಗೆ ತಾವು ಇರಬಾರದೇ ! ಹೋಗುತ್ತಿರುವವರನ್ನು ಕರೆದು ಅವಮಾನಿಸಬೇಕೆ ! ನಾನು ಮದುವೆಯಾಗದಿದ್ದರೆ ಅವರಿಗೇನು? ಎಷ್ಟು ಸೊಕ್ಕು ಅವರಿಗೆ ?' ಎಂದು ತನ್ನ ಕೋಪವನ್ನು ಸಮರ್ಥಿಸುವುದು ಇನ್ನೊಂದು ಮನಸ್ಸು.
'ಲೋಕಕ್ಕೆ ಬಂದನಂತರ ಇಂತಹವುಗಳನ್ನೆಲ್ಲಾ ಎದುರಿಸಲೇಬೇಕಾಗುತ್ತದೆ. ಸಾಧನೆಯ ಮಾರ್ಗದಲ್ಲಿ ಸದಾ ಜಾಗೃತವಾಗಿರುವುದಕ್ಕೆ ಇಂತಹ ನಿಂದೆಯ ಮಾತುಗಳು ಸಹಾಯಕವಾಗುವುದಿಲ್ಲವೇ ? ಹೊಗಳಿಕೆಗಿಂತಲೂ ಇವುಗಳಿಂದಲೇ ಹೆಚ್ಚು ಪ್ರಯೋಜನವಾದೀತು.'
ಈ ದಿಕ್ಕಿಗೆ ಆಲೋಚನೆ ಹರಿಯುತ್ತಿದ್ದಂತೆಯೇ ಮಹಾದೇವಿಗೆ ಬಸವಣ್ಣನವರ ಒಂದು ವಚನ ನೆನಪಿಗೆ ಬಂದಿತು :
ಹೊಯಿದವರೆನ್ನ ಹೊರೆದವರೆಂಬೆನು,
ಬೈದವರೆನ್ನ ಬಂಧುಗಳೆಂಬೆನು ;