ಪುಟ:Kadaliya Karpoora.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತಹ ಗುರುಲಿಂಗದೇವರು ಇಂದು ತಾವಾಗಿಯೇ ಹೇಳಿಕಳುಹಿಸಿ ತಮ್ಮ ಮನೆಗೆ ಬರುತ್ತಿರುವರೆಂಬುದನ್ನು ಕೇಳಿದಾಗ, ಓಂಕಾರಶೆಟ್ಟಿ ಲಿಂಗಮ್ಮ ನಂಬಲಾರದವರಾದರು. ಆದರೂ ಗುರುಪಾದಪ್ಪ ಅದನ್ನು ಹೇಳಿಹೋಗುವುದಕ್ಕಾಗಿಯೇ ಬಂದಿದ್ದಾನೆಂದ ಮೇಲೆ ನಂಬದಿರುವುದು ಹೇಗೆ? “ನಿಜವಾಗಿಯೂ ನೀವು ಭಾಗ್ಯಶಾಲಿಗಳು” ಎಂದು ಅವನು ಹೇಳಿದ ಮಾತು, ಅದಕ್ಕೆ ಬಹುಪಾಲು ಮಿಗಿಲಾದ ಅರ್ಥವನ್ನು ಅವರಿಗೆ ತಂದುಕೊಟ್ಟಿತು.

ಮಹಾದೇವಿಯ ಉತ್ಸಾಹಕ್ಕಂತೂ ಸಂಭ್ರಮ ಸಂತೋಷದ ಗರಿಗಳು ಮೂಡಿದ್ದುವು. ಆನಂದದ ಆಕಾಶದಲ್ಲಿ ಹಾರಿ, ಮನೆತುಂಬ ಕುಣಿದಾಡಿದಳು. ಗುರುಗಳ ಸ್ವಾಗತಕ್ಕೆ ಮತ್ತು ಸತ್ಕಾರಕ್ಕೆ ಯೋಗ್ಯವಾದ ರೀತಿಯಲ್ಲಿ ಸಿದ್ಧತೆಯನ್ನು ಮಾಡಲುದ್ಯುಕ್ತರಾದ ತಂದೆತಾಯಿಗಳಿಗೆ ನೆರವಾಗತೊಡಗಿದಳು.

ಸಿದ್ಧತೆಯೆಲ್ಲಾ ಮುಗಿಯಿತು. ಲಿಂಗಮ್ಮನ ಅಡುಗೆಯ ಕೆಲಸವೂ ಕೊನೆಗೊಂಡಿತು. ಓಂಕಾರ, ಮಠಕ್ಕೆ ಹೋಗಿ ಸ್ವಾಮಿಗಳನ್ನು ಅಲ್ಲಿಂದಲೇ ಒಡಗೊಂಡು ಬರುವುದಾಗಿ ಹೇಳಿ ಹೊರಟ. ಆದರೆ ಮೆಟ್ಟಲನ್ನಿಳಿದು ಒಂದೆರಡು ಹೆಜ್ಜೆ ಇಡುತ್ತಿರವಷ್ಟರಲ್ಲಿ ಗುರುಗಳು ಬರುತ್ತಿರುವುದು ಆ ದೂರದಿಂದಲೇ ಕಣ್ಣಿಗೆ ಬಿದ್ದಿತು. ಹಾಗೆಯೇ ಹಿಂದಕ್ಕೆ ತಿರುಗಿದ.

“ಮಹಾದೇವಿ, ಗುರುಗಳು ಬರುತ್ತಿದ್ದಾರೆ.”

ಇಬ್ಬರೂ ಹೊರಗೆ ಬಂದು ನೋಡಿದರು. ಮೂರುನಾಲ್ಕು ಜನ ಶಿಷ್ಯರ ಮಧ್ಯದಲ್ಲಿ ಗುರುಗಳು ಬರುತ್ತಿದ್ದರು. ಕಾಷಾಯ ವಸ್ತ್ರಧಾರಿಗಳಾದ ಅವರ ದಿವ್ಯವಿಗ್ರಹ ಪ್ರಧಾನವಾಗಿ ಕಾಣುತ್ತಿತ್ತು.

ತುಂಬಿದ ತಂಬಿಗೆಗಳನ್ನು ಹಿಡಿದುಕೊಂಡು ಹೊರಗೆ ಬರುವ ವೇಳೆಗೆ ಗುರುಗಳು ಮನೆಯ ಹತ್ತಿರ ಬರುತ್ತಿದ್ದರು. ಮಹಾದೇವಿಯಂತೂ ಗುರುಗಳನ್ನು ಕುತೂಹಲ ಸಂಭ್ರಮಗಳಿಂದ ನೋಡುತ್ತಿದ್ದಳು.

ಅವರ ದೀರ್ಘದೇಹ, ಉದ್ದವಾದ ಕಾವಿಯ ಕಪಿನಿಯಿಂದ ಆಚ್ಛಾದಿತವಾಗಿತ್ತು. ಅದರ ಮೇಲೊಂದು ಕಾವಿಯದೇ ದೊಡ್ಡ ಮೇಲು ಹೊದಿಕೆ. ತಲೆಯ ಮೇಲಿಂದಲೂ ಮುಚ್ಚಿಬರುವಂತೆ ಅದನ್ನು ಹೊದೆದಿದ್ದರು. ಶುಭ್ರವಾದ ಪವಿತ್ರತೆಯ ಸಂಕೇತವೆಂಬಂತೆ ಮೇಲೆದ್ದು ತೋರುತ್ತಿರುವ ತ್ರಿಪುಂಡ್ರದಿಂದ ಭೂಷಿತವಾದ ಹಣೆ. ಹತ್ತಿರಕ್ಕೆ ಬಂದಂತೆಲ್ಲಾ ಕಾಲಲ್ಲಿ ಮೆಟ್ಟಿದ ಮರದ ಹಾವುಗೆಯ ಶಬ್ದ ಕೇಳಿಬರುತ್ತಿತ್ತು.