ಪುಟ:Kadaliya Karpoora.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨

ಕದಳಿಯ ಕರ್ಪೂರ

``ಸದಾಚಾರಸಂಪನ್ನಳಾದ ಮತ್ತು ಭಕ್ತಿಪರಾಯಣಳಾದ ನನ್ನ ಮಗಳು ಅಂತಹ ಸುಖವನ್ನು ಬಯಸಲಾರಳು.

``ಅದನ್ನು ನೀವು ಹೇಗೆ ಹೇಳುವಿರಿ ? ಇಂತಹ ಒಳ್ಳೆಯ `ವರ' ಸಿಕ್ಕುತ್ತಿರುವಾಗ ಮದುವೆಯಾಗಲಿರುವ ಯಾವ ಹೆಣ್ಣು ಮಗಳು ತಾನೆ ಬೇಡ ಎಂದಾಳು ? ವಸಂತಕ ಮಹಾದೇವಿಯ ಮನಸ್ಸನ್ನು ಅರಿತನವನಂತೆ ಹೇಳಿದ.

ತಾಯಿಯ ಹತ್ತಿರ ನಡುಮನೆಯ ಒಳಗೆ ಉದ್ವೇಗ ಕಾತರಗಳ ಮುಳ್ಳಿನ ಮೇಲೆ ನಿಂತು ಇದನ್ನೆಲ್ಲಾ ಕೇಳುತ್ತಿದ್ದ ಮಹಾದೇವಿಗೆ ಈ ಮಾತು ಕೇಳಿಸಿತು. ತನ್ನ ಮನಸ್ಸನ್ನು ಕುರಿತು ನಿರ್ಧಾರದ ಮಾತುಗಳನ್ನು ಆಡುತ್ತಿರುವ ವಸಂತಕನ ನುಡಿ ಅವಳಿಗೆ ಚುಚ್ಚಿ ಎಚ್ಚರಿಸಿದಂತಾಯಿತು. ಏನೋ ಆವೇಶ ಬಂದಂತಾಯಿತು. ತಾಯಿ ತಡೆಯುತ್ತಿದ್ದರೂ ಮುಂದೆ ನುಗ್ಗಿ ಬಂದು ತಂದೆಯ ಹಿಂದೆ ನಿಂತುಕೊಳ್ಳುತ್ತಾ ಹೇಳಿದಳು :

``ಸಾಕು, ನಿಮ್ಮ ವರನನ್ನು ನೀವಲ್ಲದೆ ಇನ್ನಾರು ಹೊಗಳಬೇಕು ? ಅನಿರೀಕ್ಷಿತವಾದ ಈ ರೂಪರಾಶಿಯ ಮಿಂಚಿನಿಂದ ತಬ್ಬಿಬ್ಬಾದ ವಸಂತಕನಿಗೆ ಅವಳ ಮಾತು ಬೆಚ್ಚಿಬೀಳುವಂತೆ ಮಾಡಿತು. ಮತ್ತೆ ಮುಂದುವರಿಯಿತು ಮಹಾದೇವಿಯ ಮಾತು :

``ಒಳ್ಳೆಯ ವರ ! ಹುಂ. ನಾಚಿಕೆಯಾಗಬೇಕು, ನಿಮಗೂ ಆ ಒಳ್ಳೆಯ ವರನಿಗೂ ರಾಜನೆಂಬ ಗೌರವದಿಂದ ನಿಂತು ಉತ್ಸವವನ್ನು ನೋಡುವ ಊರಿನ ಹೆಣ್ಣು ಮಕ್ಕಳನ್ನು, ನಿಮ್ಮ ರಾಜ ನೋಡುವ ದೃಷ್ಟಿ ಇದೇಯೇನು ? ಹೋಗಿ... ಹೇಳಿ ನಿಮ್ಮ ಆ ಒಳ್ಳೆಯ ವರನಿಗೆ, ಇಲ್ಲಿ `ವಧು' ಯಾರೂ ಇಲ್ಲವೆಂದು.

``ದುಡುಕಬೇಡ ತಾಯೀ, ನಿನ್ನ ಭವಿಷ್ಯವನ್ನು ನಿರ್ಧರಿಸಲು, ನಿನ್ನ ತಾಯಿ ತಂದೆಗಳಿದ್ದಾರೆ... ಎಂದು ಓಂಕಾರನತ್ತ ತಿರುಗಿ :

ಶೆಟ್ಟರೇ... ನಿಮ್ಮ ಮಗಳ ಹಾಗೆ ನೀವೂ ದುಡುಕಬೇಡಿ. ನಮ್ಮ ರಾಜರು ಪೂರ್ವಾಪರಗಳನ್ನು ಆಲೋಚಿಸಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆ. ಕಂಡ ಕಂಡ ಹೆಣ್ಣುಗಳನ್ನು ಅವರು ಬಯಸುವವರಲ್ಲ. ಮಹಾದೇವಿ ಅವಿವಾಹಿತಳೆಂಬುದನ್ನೂ, ತಮ್ಮ ಮದುವೆಗೆ ಯೋಗ್ಯಳೆಂಬುದನ್ನೂ ಅರಿತೇ ಇದಕ್ಕೆ ಮನಸ್ಸುಮಾಡಿದ್ದಾರೆ. ಇದುವರೆಗೆ ಅವಳು ಅವಿವಾಹಿತಳಾಗಿ ಉಳಿದಿರುವುದೂ ಒಂದು ದೈವಸಂಕೇತವೆಂದೇ ಭಾವಿಸಿಕೊಳ್ಳಿರಿ. ನಮ್ಮ ರಾಜರಿಗಾಗಿಯೇ ಮೀಸಲಾದವಳು ನಿಮ್ಮ ಮಗಳು.

ಓಂಕಾರನಿಗೆ ತಡೆಯಲಾಗಲಿಲ್ಲ :