ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬಲೆ
೯೩


ಮುಖ ಭಾವಪರವಶವಾದಂತಿತ್ತು. ತಲೆಯ ತುಂಬಾ ಮುಸುಗನ್ನು ಹೊದೆದು ಗಂಭೀರ ಭಾವದಿಂದ ಹೊರಗೆ ಬಂದ ಅವಳ ದಿವ್ಯವಿಗ್ರಹವನ್ನು ಕಂಡು ವಸಂತಕನಿಗೆ ಗೌರವ ಉಕ್ಕಿಬಂತು. ತಾನರಿಯದಂತೆಯೇ ಎದ್ದು ನಿಂತು ನಮಸ್ಕರಿಸಿದ.

``ಕುಳಿತುಕೊಳ್ಳಬೇಕು, ರಾಜಗೆಳೆಯರು. ನಾನೇನು ಆಗಲೇ ಮಹಾರಾಣಿಯಾಗಿ ಹೋದೇನೇ ನೀವು ನಮಸ್ಕರಿಸುವುದಕ್ಕೆ ? ಅವಳ ಮಾತನ್ನು ಕೇಳಿ ಆಶ್ಚರ್ಯಗೊಂಡ ; ತಾನು ಬಂದ ಕಾರ್ಯವಾದಂತೆಯೇ ಎಂಬ ಭಾವನೆಯ ಸಂತೋಷದಲ್ಲಿ ಓಲಾಡಿದ.

``ಆ ಪರಮಭಾಗ್ಯವನ್ನು ನೀವು ನಮಗೆ ಕರುಣಿಸಿಕೊಡಬೇಕು ಮಹಾತಾಯಿ. ನಮ್ಮ ರಾಜನನ್ನು ಉಳಿಸಿಕೊಡಬೇಕು. ನೀವು ಒಲಿಯದ ಹೊರತು ಅವರು ಬದುಕಲಾರರೆಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ. ಈ ಒಂದೇ ದಿನದಲ್ಲಿ ಅವರ ಸ್ಥಿತಿ ಹಾಗಾಗಿದೆ.

``ರಾಜನೆನಿಸಿಕೊಂಡವರಿಗೆ ಮನಃಸ್ಥೈರ್ಯವಿರಬೇಕಲ್ಲವೇ ? ನಿಮ್ಮ ರಾಜರು ಅಷ್ಟೊಂದು ದುರ್ಬಲಮನಸ್ಸಿನವರೇ ? ಕೇಳಿದಳು ಮಹಾದೇವಿ.

``ಇಲ್ಲ ತಾಯಿ, ಅವರು ಅಂತಹ ದೌರ್ಬಲ್ಯಕ್ಕೆ ಒಳಗಾಗುವವರಲ್ಲ. ನಾನು ಅವರ ಬಾಲ್ಯಸ್ನೇಹಿತ. ನಾನು ಕಂಡಂತೆ ಇದು ಅವರ ಜೀವನದಲ್ಲಿ ಮೊಟ್ಟ ಮೊದಲನೆಯ ಅನುಭವ ವಸಂತಕನ ಉತ್ತರ.

``ಹಾಗಾದರೆ ಇದಕ್ಕೆ ನಾನೇ ಕಾರಣವೆಂದು ನೀವು ಹೇಳಿದಂತಾಯಿತಲ್ಲವೆ? ತಪ್ಪೆಲ್ಲಾ ನನ್ನದೇ ಅನ್ನಿ.

ಮಹಾದೇವಿಯ ಪ್ರಶ್ನೆಯಿಂದ ವಸಂತಕ ಕ್ಷಣಕಾಲ ತಬ್ಬಿಬ್ಬಾದ. ಅನಂತರ ಹೇಳಿದ :

``ಹಾಗನ್ನಲಾರೆ. ಇದರಲ್ಲಿ ತಪ್ಪಾರದೂ ಇಲ್ಲ. ಇದಾವುದೋ ಜನ್ಮಾಂತರದ ಸಂಬಂಧವೆಂದು ನನಗೆ ಅನ್ನಿಸುತ್ತದೆ. ಆದುದರಿಂದ ಮಹಾರಾಜರ ಪ್ರೇಮದ ಕೈಯನ್ನು ತಾವು ತಿರಸ್ಕರಿಸಬಾರದು.

``ನಮ್ಮ ಕ್ಷುದ್ರ ಸುಖದ ಆಸೆಯನ್ನು ಜನ್ಮಾಂತರಸಂಬಂಧವೆಂದು ಸಮರ್ಥಿಸಿಕೊಳ್ಳುವುದು ಸುಲಭ. ಒಂದು ವೇಳೆ ಅದೇ ನಿಜವಾಗಿದ್ದರೆ, ನಿಮ್ಮ ರಾಜರು ನನಗೋಸ್ಕರವಾಗಿ ಸ್ವಲ್ಪ ತ್ಯಾಗಮಾಡಲು ಸಿದ್ಧರಾಗಿದ್ದಾರೆಯೇ? ಮಹಾದೇವಿ ಪ್ರಶ್ನಿಸಿದಳು.