``ಸ್ವಲ್ಪವಲ್ಲ... ಎಂತಹ ಅಪಾರವಾದ ತ್ಯಾಗಕ್ಕೆ ಬೇಕಾದರೂ ಸಿದ್ಧರಾಗಿದ್ದಾರೆ. ತಮಗಾಗಿ ಏನನ್ನು ಬೇಕಾದರೂ ಮಾಡುತ್ತಾರೆ. ರಾಜ್ಯಸಂಪತ್ತನ್ನೆಲ್ಲಾ ಧಾರೆಯೆರೆಯುತ್ತಾರೆ. ಬಂದ ಕಾರ್ಯ ಕೈಗೂಡುತ್ತಿರುವ ಉತ್ಸಾಹದಿಂದ ಹೇಳಿದ ವಸಂತಕ.
``ರಾಜ್ಯದ ಸಂಪತ್ತು ನನಗೆ ಬೇಕಾಗಿಲ್ಲ. ನನ್ನ ತಂದೆತಾಯಿಗಳಿಗಂತೂ ಅದು ಇನ್ನೂ ದೂರ. ಇವರು ಎಂತಹ ಸಂಪತ್ತಿಗೂ ತಮ್ಮ ಮಗಳನ್ನೂ ಮಾರುವವರಲ್ಲ ಎಂಬುದನ್ನು ನೀವು ಅರಿತಿರಬೇಕು. ಆದರೆ ನಾನೇ ಇಂದು ಅವರನ್ನು ಬಿಡುತ್ತಿದ್ದೇನೆ. ನಾನು ಎಂತಹ ತ್ಯಾಗಮಾಡುತ್ತಿದ್ದೇನೆಂಬುದನ್ನು ನೀವು ಅರಿಯಲಾರಿರಿ.
``ಬಲ್ಲೆ ತಾಯಿ. ವಿನಯದಿಂದ ಹೇಳಿದ ವಸಂತಕ.
``ಅದಕ್ಕೆ ಅನುಗುಣವಾದ ತ್ಯಾಗವನ್ನು ನಿಮ್ಮ ರಾಜರೂ ಮಾಡಬೇಕು. ಅವರ ಪ್ರೇಮ ಉದಾತ್ತವಾದುದೇ ಆದರೆ, ನನ್ನ ಮನೋಧರ್ಮಕ್ಕೆ ವಿರುದ್ಧವಾದ ಬಲಾತ್ಕಾರದ ತಪ್ಪುಗಳನ್ನು ಮಾಡವುದಿಲ್ಲವೆಂದು ಭರವಸೆ ಕೊಡಬೇಕು. ನನ್ನ ಸಾಧನೆಗೆ ಅಡ್ಡಿಬರಬಾರದು. ತಾವೂ ಭಕ್ತಿ ಸಾಧನೆಯ ಕಡೆಗೆ ಮನಸ್ಸು ಕೊಡಬೇಕು - ಇದೇ ನನ್ನ ಷರತ್ತು. ಇವುಗಳಿಗೆ ರಾಜರು ಸಮ್ಮತಿಸುವುದಾದರೆ ನಾನು ಅರಮನೆಗೆ ಬರುವುದಕ್ಕೆ ಸಿದ್ಧ. ತನ್ನ ನಿರ್ಧಾರವನ್ನು ಹೇಳಿದಳು.
ಕೊನೆಯ ಮಾತೊಂದು ವಸಂತಕನ ಮನಸ್ಸು ಹೊಕ್ಕು ಉಳಿದುದೆಲ್ಲವನ್ನೂ ಮರೆಸಿತು. ಸಂತೋಷದಿಂದ ಹೇಳಿದ :
``ಧನ್ಯನಾದೆ. ಇದನ್ನೆಲ್ಲಾ ರಾಜರು ಸಂತೋಷದಿಂದ ಒಪ್ಪುತ್ತಾರೆ. ತಮ್ಮ ಔದಾರ್ಯದಿಂದ ನನ್ನನ್ನು ಕೃತಾರ್ಥರನ್ನಾಗಿ ಮಾಡಿದಿರಿ. ರಾಜರನ್ನು ಬದುಕಿಸಿದಿರಿ.
``ಅದಿನ್ನೂ ಮುಂದೆ ನಿರ್ಧಾರವಾಗಬೇಕು. ರಾಜರಿಗೆ ನನ್ನ ಷರತ್ತುಗಳನ್ನು ಹೇಳಿ. ಅದಕ್ಕೆ ಅವರು ಒಪ್ಪುವಂತಿದ್ದರೆ ನನ್ನನ್ನು ಕರೆದೊಯ್ಯಲು ಬರಬಹುದು. ನಾನೂ ಒಮ್ಮೆ ಅದನ್ನು ಅವರ ಬಾಯಿಂದಲೇ ಕೇಳಿ ಸ್ಥಿರಪಡಿಸಿಕೊಳ್ಳುತ್ತೇನೆ.
``ಅಗತ್ಯವಾಗಿ ಆಗಬಹುದು. ಓಂಕಾರ ಶೆಟ್ಟರೇ, ಲಿಂಗಮ್ಮ ತಾಯಿ, ನಿಮ್ಮ ಮಗಳು ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದ್ದಾರೆ. ಇಂತಹ ಒಡತಿಯನ್ನು ಪಡೆದು ಧನ್ಯರಾಗಿದ್ದೇವೆ ಎಂದು ಮಹಾದೇವಿಯನ್ನು ಕುರಿತು, ``ಹಾಗಾದರೆ ಬೆಳಿಗ್ಗೆ ಬಂದು ತಮ್ಮ ದರ್ಶನವನ್ನು ಪಡೆಯುತ್ತೇನೆ ಎಂದು ನಮಸ್ಕರಿಸಿ ಬೀಳ್ಕೊಂಡ.