ಪುಟ:Kannadigara Karma Kathe.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೮

ಕನ್ನಡಿಗರ ಕರ್ಮಕಥೆ

ಚಿಂತೆ ನಿಮಗೆ ಬೇಡ. ಈ ಬಾಬಿನಲ್ಲಿ ನಕಾರಾತ್ಮಕ ಶಬ್ದವನ್ನು ನುಡಿಯಲಿಕ್ಕೆ ರಾಮರಾಜನಿಗೆ ಧೈರ್ಯವಾಗಲಾರದು.

ದರ್ಬಾರಿಗೃಹಸ್ಥ-ಧೈರ್ಯವಾಗಲಿಕ್ಕಿಲ್ಲ; ಆದರೆ ವಿಜಯನಗರದ ಗಡಿಯಲ್ಲಿ ಬಂದಬಳಿಕ, ಅವರ ಅಪ್ಪಣೆ ಹೊರತು ಏನೂ ಮಾಡಲಿಕ್ಕೆ ಬರುವದಿಲ್ಲ. ತಮ್ಮ ಪತ್ರವು ಹ್ಯಾಗೂ ಹೋಗಿರುತ್ತದೆ, ಅದರ ಉತ್ತರ ಬರುವ ತನಕ ಹಾದಿಯನ್ನು ನೋಡಿರಿ. ಮಹಾರಾಜರು ನಿಮ್ಮ ಮರ್ಜಿಗೆ ವಿರುದ್ಧವಾಗಿ ನಡೆಯಲಾರರು. ಅವರಿಗೆ ಇಂಥ ಕೃತ್ಯವು ಸೇರುವದಿಲ್ಲ.

ಈ ಮಾತುಗಳನ್ನು ಕೇಳಿ ರಣಮಸ್ತಖಾನನು ವಿಜಯನಗರದ ಕಡೆಗೆ ನೋಡಿ- “ಅಗೋ, ನಂದನು ನೋಡಿರಿ ನಮ್ಮ ಸಿಪಾಯಿಯು” ಎಂದು ನುಡಿಯುತ್ತಿರಲು, ಸಿಪಾಯಿಯು ಬಂದು ರಾಮರಾಜನು ಕೊಟ್ಟ ಉತ್ತರವನ್ನು ಖಾನನ ಕೈಯಲ್ಲಿ ಕೊಟ್ಟನು. ಖಾನನು ಆತುರದಿಂದ ಅದನ್ನು ಒಡೆದು ಒಳಗಿನ ಪತ್ರೋತ್ತರಗಳನ್ನು ಓದಹತ್ತಿದನು. ಮೇಲಿನ ಒಕ್ಕಣಿಕೆಯು ಮುಗಿದ ಬಳಿಕ ಮುಂದಿನ ಸಂಗತಿಯು ಅದರಲ್ಲಿ ಹೀಗೆ ಬರೆದಿತ್ತು- “ನೀವು ಬರೆದಿರುವಂತೆ ಕೃತ್ಯವು ಸಂಭವಿಸಿದ್ದರೆ, ಪರಮನ್ಯಾಯವು; ಆದರೆ ನಾವು ಈಗ ಒಂದು ಪಕ್ಷದವರ ಅಂಬೋಣವನ್ನು ಕೇಳಿಕೊಂಡಂತಾಯಿತು. ಇನ್ನೊಂದು ಪಕ್ಷದವರ ಅಂಬೋಣವನ್ನು ಕೇಳಿಕೊಂಡ ಹೊರತು ಯಾವ ಮಾತನ್ನೂ ಆಡಲಿಕ್ಕೆ ಬರುವದಿಲ್ಲ. ನೀವು ಪತ್ರದಲ್ಲಿ ಬರೆದಿರುವಂತೆ ಆ ಜನರು ಇತ್ತ ಕಡೆಗೇ ಬರುವರಾದ್ದರಿಂದ, ಅವರು ಬಂದಕೂಡಲೇ ವಿಚಾರಿಸಿ, ಯೋಗ್ಯ ವ್ಯವಸ್ಥೆ ಮಾಡಲಾಗುವದು. ನಿಷ್ಕಾರಣನಾಗಿ ಬಡಬಗ್ಗರಿಗೆ ವಿಶೇಷವಾಗಿ ಸ್ತ್ರೀಯರಿಗೆ, ತ್ರಾಸವಾದದ್ದನ್ನು ಮಹಾರಾಜರು ಎಂದಿಗೂ ತಡೆಯರು. ಹೀಗೆ ತ್ರಾಸ ಕೊಟ್ಟವರನ್ನು ಶಿಕ್ಷಿಸದೆ ಅವರು ಎಂದಿಗೂ ಉದಾಸೀನ ಮಾಡಲಾರರೆಂಬುದನ್ನು ತಾವು ಪೂರ್ಣ ಲಕ್ಷ್ಯದಲ್ಲಿಡಬೇಕು.

****