ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೦
ಕನ್ನಡಿಗರ ಕರ್ಮಕಥೆ

ನೆಟ್ಟಗಾಗಲಿಲ್ಲೆಂಬದಿಷ್ಟೇ ನಾವು ನಿಮಗೆ ತಿಳಿಸಿದೆವು, ರಣಮಸ್ತಖಾನನು ನಮ್ಮ ತಾಬೆದಾರನು, ನಮ್ಮ ಅಪರಾಧಿಯು; ಆದ್ದರಿಂದ ಆತನನ್ನು ನಮ್ಮ ಎರಡನೆಯ ವಕೀಲನ ವಶಕ್ಕೆ ಒಪ್ಪಿಸಬೇಕು. ನಿಜವಾಗಿ ನೋಡಿದರೆ, ಆತನಿಂದ ನಿಮಗೇನೂ ಪ್ರಯೋಜನವಾಗಲಿಕ್ಕಿಲ್ಲ. ಆತನನ್ನು ನಂಬಿ ನೀವು ಕೆಡುವ ಸಂಭವವೇ ವಿಶೇಷವಾಗಿರುತ್ತದೆ; ಆದರೆ ನಮ್ಮ ನಿಮ್ಮ ಸ್ನೇಹಸಂಬಂಧಕ್ಕೆ ಸುಮ್ಮನೆ ಬಾಧೆ ಬರಬಾರದೆಂದು ನಾವು ನಿಮ್ಮನ್ನು ಹೀಗೆ ಕೇಳಿಕೊಂಡಿದ್ದೇವೆ. ನಮ್ಮ ಕೇಳಿಕೆಯಂತೆ ರಣಮಸ್ತನು ನಮ್ಮ ಅಪರಾಧಿಯೆಂದು ತಿಳಿದು, ಆತನನ್ನು ಕೂಡಲೇ ನಮ್ಮ ವಕೀಲನ ಸ್ವಾಧೀನಪಡಿಸಬೇಕು. ಸದ್ಯಕ್ಕೆ ನಿಮಗೆ ನಾವು ಇಷ್ಟೇ ಸೂಚಿಸುವೆವು. ಸುಜ್ಞರಿಗೆ ಹೆಚ್ಚಿಗೆ ಬರೆಯಲವಶ್ಯವಿಲ್ಲ.

ಬಾದಶಹನು ರಾಮರಾಜನಿಗೆ ಬರೆದ ಪತ್ರದ ಸಾರಾಂಶವು ಮೇಲೆ ಬರೆದಂತೆ ಇತ್ತು. ಬಾದಶಹನ ಮೂಲಪತ್ರವು ಆಗಿನ ಪದ್ಧತಿಯಂತೆ ಬಹು ವಿಸ್ತಾರವಾಗಿ ಬರೆಯಲ್ಪಟ್ಟಿತ್ತು. ಬಾದಶಹನ ವಕೀಲನು ನೆರೆದ ದರ್ಬಾರದಲ್ಲಿ ಆ ಪತ್ರವನ್ನು ರಾಮರಾಜನಿಗೆ ಕೊಟ್ಟನು. ರಾಮರಾಜನು ಅದನ್ನು ತಕ್ಕೊಂಡನು. ಆತನು ತಾನೇ ಕೈಮುಟ್ಟಿ ಅದನ್ನು ಒಡೆದು, ಮನಸ್ಸಿನಲ್ಲಿಯೇ ಓದಿ ಒಮ್ಮೆ ನಕ್ಕನು. ಉಳಿದವರಿಗೆ ಅದರೊಳಗಿನ ಸಂಗತಿಯೇನೂ ಗೊತ್ತಾಗಲಿಲ್ಲ. ಅವರು ಒಂದೇಸವನೇ ರಾಮರಾಜನ ಕಡೆಗೆ ನೋಡುತ್ತಲಿದ್ದರು. ಆಗ ರಾಮರಾಜನು ಆ ವಕೀಲನನ್ನು ಕುರಿತು-ತಾವು ಕೊಟ್ಟ ಈ ಪತ್ರವು ನಮಗೆ ಮುಟ್ಟಿತು. ಅದನ್ನು ಕುರಿತು ನಾವು ಪೂರ್ಣ ವಿಚಾರಮಾಡಿ ಆಮೇಲೆ ಉತ್ತರ ಬರೆಯುವೆವು. ಈಗಲೇ ಅದರ ಉತ್ತರವನ್ನು ಬರೆಯುತ್ತಿದ್ದೆವು; ಆದರೆ ಹಾಗೆ ಮಾಡಿದರೆ, ಏನೂ ವಿಚಾರಮಾಡದೆ ಉತ್ತರ ಬರೆದರೆಂದು ನಿಮ್ಮ ಒಡೆಯರು ಅನ್ನಬಹುದು; ಆದ್ದರಿಂದ ವಿಚಾರಕ್ಕಾಗಿ ನಾಲ್ಕು ದಿನ ತಡೆದು, ಆಮೇಲೆ ನಮ್ಮ ವಕೀಲನ ಕೈಯಿಂದ ನಿಮ್ಮ ಕಡೆಗೆ ಉತ್ತರವನ್ನು ಕೊಟ್ಟುಕಳಿಸುವೆವು. ಈಗ ತೊಂದರೆ ಕೊಟ್ಟ ಬಗ್ಗೆ ತಾವು ಕ್ಷಮಿಸಬೇಕು-ಎಂದು ಹೇಳಿದನು. ರಾಮರಾಜನ ಆ ನಗೆಯ ರೀತಿಯೂ, ಮಾತಿನ ಬಗೆಯೂ ಬಾದಶಹನ ವಕೀಲನನ್ನು ಸಿಟ್ಟಿಗೆಬ್ಬಿಸುವ ಹಾಗಿದ್ದವು. ಅದನ್ನು ನೋಡಿ ಆ ವಕೀಲನು ಅಲ್ಲಿ ಕುಳಿತುಕೊಳ್ಳಲಾರದೆ ಹೊರಟುಹೋಗುವದಕ್ಕಾಗಿ ಎದ್ದುನಿಂತುಕೊಂಡನು. ಅಷ್ಟರಲ್ಲಿ ಆತನಿಗೆ ಪ್ರತಿಕೂಲವಾದ ಮತ್ತೊಂದು ಪ್ರಸಂಗವು ಒದಗಿತು. ರಾಮರಾಜನು ತನ್ನ ಬಳಿಯಲ್ಲಿಯೇ ನಿಂತುಕೊಂಡಿದ್ದ ರಣಮಸ್ತಖಾನನನ್ನು ನೋಡಿ ನಕ್ಕು, ಬಾದಶಹನ ಆ ಪತ್ರವನ್ನು ಆತನ ಕೈಯಲ್ಲಿ ಕೊಟ್ಟನು. ಅದನ್ನು ನೋಡಿದ