ಕೂಡಲೇ ಆ ವಕೀಲನು ಸಿಟ್ಟಿನಿಂದ ಹುಬ್ಬು ಗಂಟಿಕ್ಕಿ, ಏನೋ ಒಟಗುಟ್ಟುತ್ತ ದರ್ಬಾರದ ರೀತಿಯಿಂದ ಕುರ್ನಿಸಾತ ಮೊದಲಾದದ್ದನ್ನೇನೂ ಮಾಡದೆ, ದರ್ಬಾರದಿಂದ ಹೊರಬಿದ್ದು ಹೋಗಿ, ಮೇಣೆಯಲ್ಲಿ ಕುಳಿತುಕೊಂಡು ತನ್ನ ಬಿಡಾರಕ್ಕೆ ನಡೆದನು. ವಕೀಲನು ಹೊರಟುಹೋದ ಕೂಡಲೇ, ರಾಮರಾಜನು ಬೇಗನೆ ದರ್ಬಾರು ಮುಗಿಸಿ, ರಣಮಸ್ತಖಾನನಿಗೆ- “ಈ ಪತ್ರವನ್ನು ಮನಸ್ಸುಗೊಟ್ಟು ಓದಿ, ಇನ್ನು ಒಂದು ಪ್ರಹರದ ಮೇಲೆ ತನ್ನ ಬಳಿಗೆ ಬರಬೇಕೆಂದು ಹೇಳಿ ಆತನನ್ನು ಕಳಿಸಿದನು. ಬಾದಶಹನ ಪತ್ರವನ್ನು ಓದಿದಾಗಿನಿಂದ ರಾಮರಾಜನ ವೃತ್ತಿಯು ಒಂದು ವಿಧವಾಯಿತು. ಆ ವೃತ್ತಿಯಲ್ಲಿ ಆನಂದವು ವಿಶೇಷವಾಗಿತ್ತು. ಈ ಪತ್ರದ ಉಪಯೋಗವು ಬಹಳ ಚೆನ್ನಾಗಿ ಆಗುವದೆಂದು ರಾಮರಾಜನು ತಿಳಕೊಂಡನು. ನಿನ್ನನ್ನು ಬೆನ್ನಿಗೆ ಹಾಕಿಕೊಂಡದ್ದರಿಂದ, ತಾನು ಎಂಥ ವಿಪತ್ತಿಗೆ ಗುರಿಯಾಗಬೇಕಾಯಿತೆಂಬದನ್ನು ಆತನು ರಣಮಸ್ತಖಾನನ ಮನಸ್ಸಿನಲ್ಲಿ ತುಂಬಬೇಕಾಗಿತ್ತು. ಅದೇ ಉದ್ದೇಶದಿಂದಲೇ ಆತನು ರಣಮಸ್ತಖಾನನ ಕೈಯಲ್ಲಿ ಬಾದಶಹನ ಪತ್ರವನ್ನು ಕೊಟ್ಟಿದ್ದನು. ರಣಮಸ್ತಖಾನನು ಕೇವಲ ಕೃತಜ್ಞತೆಯಿಂದ ಬಾದಶಹನ ವಿರುದ್ಧವಾಗಿ ತನಗೆ ಸಹಾಯ ಮಾಡಬೇಕೆಂಬುದೇ ರಾಮರಾಜನ ಉದ್ದೇಶವಾಗಿತ್ತು.
ಇತ್ತ ರಣಮಸ್ತಖಾನನು ಆ ಪತ್ರವನ್ನು ಏಕಾಂತದಲ್ಲಿ ಸ್ವಸ್ಥವಾಗಿ ಕುಳಿತು ಲಕ್ಷಪೂರ್ವಕವಾಗಿ ಓದಿ, ತನ್ನೊಳಗೆ ನಕ್ಕನು. ವಿಚಾರಮಾಡಿ ನೋಡಿದರೆ, ಅದರೊಳಗಿನ ಸಂಗತಿಯು ಅವನ ಎದೆಯೊಡೆಸುವ ಹಾಗೆ ಇದ್ದದ್ದರಿಂದ ಪತ್ರವನ್ನು ಆತನು ಭಯಗ್ರಸ್ತನಾಗಿ ಓದಬೇಕಾಗಿತ್ತು; ಆದರೆ ಭಯದ ಚಿಹ್ನವು ಲೇಶವಾದರೂ ಆತನ ಮುಖದಲ್ಲಿ ತೋರಲಿಲ್ಲ. ಇನ್ನು ರಾಮರಾಜರು ತನ್ನನ್ನು ಬಾದಶಹರ ಕಡೆಗೆ ಕಳಿಸದೆ, ತನ್ನ ಪಕ್ಷವಹಿಸಿ, ಬಾದಶಹನಿಗೆ ಏನಾದರೂ ಪತ್ರ ಬರೆಯುವರೆಂದು ಆತನು ನಿಶ್ಚಯವಾಗಿ ತಿಳಕೊಂಡಿದ್ದನು, ಆದರೂ ಅವನು ಆ ಪತ್ರವನ್ನು, ಪೆಟ್ಟಿನ ಮೇಲೆ ಪೆಟ್ಟು ಎರಡು ಸಾರೆ ಓದಿ, ಅದರೊಳಗಿನ ಸಂಗತಿಯನ್ನೆಲ್ಲ ಅಕ್ಷರಶಃ ತನ್ನ ತಲೆಯಲ್ಲಿ ತುಂಬಿಕೊಂಡಂತೆ ಮಾಡಿದನು, ಆಮೇಲೆ ಸ್ವಸ್ಥಮನಸ್ಸಿನಿಂದ ಊಟ ಮಾಡಿ-ಉಪಚಾರಗಳಾದ ಮೇಲೆ, ಆತನ ರಾಮರಾಜನ ಬಳಿಗೆ ಹೋದನು. ಆತನು ಬರುತ್ತಲೇ ರಾಮರಾಜನು ತನ್ನ ಬಳಿಯಲ್ಲಿದ್ದ ಜನರನ್ನೆಲ್ಲ ಹೊರಗೆ ಕಳಿಸಿ, ರಣಮಸ್ತಖಾನನಿಗೆ-ಯಾಕೆ ? ಓದಿದಿರೋ ಪತ್ರವನ್ನು ? ಅದಕ್ಕೆ ಉತ್ತರವೇನು ಬರೆಯಬೇಕು ? ಎಂದು ಕೇಳಿದನು. ಅದಕ್ಕೆ ರಣಮಸ್ತಖಾನನು