ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೦
ಕನ್ನಡಿಗರ ಕರ್ಮಕಥೆ

ನನ್ನ ಸಂರಕ್ಷಣದ ವ್ಯವಸ್ಥೆಯನ್ನು ನಾನು ಮಾಡಿಕೊಳ್ಳುವದಕ್ಕಿಂತ, ನಿನ್ನ ಶೌರ್ಯವನ್ನು ಕಣ್ಣುಮುಟ್ಟಿ ನೋಡುವ ವ್ಯವಸ್ಥೆಯನ್ನು ನಾನು ಮೊದಲು ಮಾಡಿಕೊಳ್ಳಬೇಕಾಗಿರುತ್ತದೆ; ಯಾಕೆಂದರೆ ಪರಾಕ್ರಮದಲ್ಲಿ ನನ್ನ ಆದರಕ್ಕೆ ನೀನು ಪಾತ್ರವಿರುತ್ತೀಯೆಂದು ನಾನು ಈ ಮೊದಲೇ ತರ್ಕಿಸಿರುವದು ನಿಜವೆಂದು ನನ್ನ ಅನುಭವಕ್ಕೆ ಬರಬೇಕಾಗಿರುತ್ತದೆ.

ರಣಮಸ್ತಖಾನ-ತಮ್ಮ ಸಂರಕ್ಷಣದ ವ್ಯವಸ್ಥೆಯನ್ನು ಎರಡನೆಯವರು ಯಾಕೆ ಮಾಡಬೇಕು ? ನೂರಾರು ಜನರು ಒಮ್ಮೆಲೆ ನಿಮ್ಮ ಮೈಮೇಲೆ ಬಂದರೂ ನೀವು ಅವರಿಗೆ ಸೊಪ್ಪುಹಾಕುವಹಾಗಿಲ್ಲ. ತಮ್ಮ ಬಳಿಯಲ್ಲಿ ನಾನೂ ಇರುವದರಿಂದ ನನ್ನ ಶೌರ್ಯವು ತಮ್ಮ ಕಣ್ಣಿಗೆ ಬಿದ್ದು ನನ್ನ ಲಾಭವು ಮಾತ್ರ ಆಗುವದು.

ರಾಮರಾಜ-ನೀನು ಅಂಥ ಸಮರ ಪಾಂಡಿತ್ಯವನ್ನು ತೋರಿಸುವೆ ಎಂಬುದನ್ನು ನಾನು ಬಲ್ಲೆನು. ನೀನು ನನ್ನ ಬಳಿಯಲ್ಲಿಯೇ ಇರು. ನಿನ್ನ ಚಾರರು ಹೇಳಿರುವ ಸುದ್ದಿಯ ಉಪಯೋಗವನ್ನು ಹ್ಯಾಗೆ ಮಾಡಿಕೊಳ್ಳಬೇಕೆಂಬದನ್ನು ನಾನು ಪೂರ್ಣವಾಗಿ ಆಲೋಚಿಸಿರುತ್ತೇನೆ. ಶತ್ರುಗಳು ತುಂಗಭದ್ರೆಯ ಹೊಳೆಯನ್ನು ದಾಟುವ ಹಾದಿಯನ್ನು ನಾನು ನೋಡುವದೇ ಇಲ್ಲ. ನಾವೇ ತುಂಗಭದ್ರೆಯನ್ನು ದಾಟಿಹೋಗಿ ತುಂಗೆ ಕೃಷ್ಣಗಳ ಮಧ್ಯದಲ್ಲಿರುವ ಅವರೊಡನೆ ಕಾದಿ, ಅವರನ್ನು ಹಿಂದಕ್ಕಟ್ಟುವೆವು. ತುಂಗಭದ್ರೆಯ ತನಕ ಅವರನ್ನು ಬಾರದಂತೆ ಮಾಡಿಬಿಟ್ಟರೆ ಕಾಳಹೊಳೆಗಳ ವಾದವೇ ನಿಂತು ಹೋಗುವದು. ಶತ್ರುಗಳು ಹ್ಯಾಗೂ ಕೃಷ್ಣೆಯನ್ನು ದಾಟಿ ಬಂದೇ ಇರುವರು. ಇತ್ತಕಡೆಯಿಂದ ನಾವು ದೂಡುತ್ತ ಹೋಗುತ್ತೇವೆ. ನಾವು ಮುಗಿಬಿದ್ದು ಹೋದೆವೆಂದರೆ ಅವರಿಗೆ ಓಡಲಿಕ್ಕೆ ದಿಕ್ಕುಗಳು ಸಾಲಲಿಕ್ಕಿಲ್ಲ. ನಾವು ಅವರನ್ನು ನಮ್ಮ ಸೀಮೆಯಲ್ಲಿಯಾದರೂ ಯಾಕೆ ಬರಗೊಡಬೇಕು ?

ಈ ಮೇರೆಗೆ ನುಡಿದು ರಾಮರಾಜನು ಕೂಡಲೆ ತಿರುಮಲ ವೆಂಕಟಾದ್ರಿಗಳ ಕಡೆಗೆ ಪತ್ರಗಳನ್ನು ಬರೆದು ಅವನ್ನು ರಾವುತರ ಕೂಡ ಕಳಿಸಿದನು. ಆ ಪತ್ರಗಳಲ್ಲಿ ಆತನು ಅವರಿಗೆ ಸ್ಪಷ್ಟವಾಗಿ- “ನಾವು ನಮ್ಮ ಮೂರೂ ಸೈನ್ಯಗಳನ್ನು ತುಂಗಭದ್ರೆಯನ್ನು ದಾಟಿಸಿಕೊಂಡು ಹೋಗಿ ಶತ್ರುಗಳ ದೂಳಹಾರಿಸಿಬಿಡಬೇಕು. ತುಂಗಾ-ಕೃಷ್ಣೆಗಳ ಮಧ್ಯದಲ್ಲಿ ಯವನರನ್ನು ಹಿಡಿದುಬಿಟ್ಟರೆ, ಅವರಿಗೆ ಓಡಿಹೋಗಲಿಕ್ಕೆ ಭೂಮಿಯು ಸಾಲಲಿಕ್ಕಿಲ್ಲ. ಆಗ ಪುನಃ ತಲೆಯೆತ್ತದಂತೆ ಅವರನ್ನು ಚೆನ್ನಾಗಿ ಥಳಿಸೋಣ” ಎಂದು ಬರೆದಿದ್ದನು. ಶತ್ರುಗಳ ಮೇಲೆ ಯಾರು ಯಾವ