ಪುಟ:Kannadigara Karma Kathe.pdf/೨೮೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಮಾಸಾಹೇಬರ ದುರವಸ್ಥೆ
೨೬೯
 

ಈ ದುಷನನ್ನು ನಾನಾಗಿ ಕರಿಸಿಕೊಂಡು ಮೂಲಮಾಡಿಕೊಂಡಹಾಗಾಯಿತಲ್ಲ ! ಇನ್ನು ಈ ಅರಿಷ್ಟನಿವಾರಣವನ್ನು ಹ್ಯಾಗೆ ಮಾಡಿಕೊಳ್ಳಬೇಕು? ಮಾರ್ಜೀನೆಯನ್ನಾದರೂ ಕೂಡಿ ಕರೆಯಲಾ? ಎಂಬ ವಿಚಾರಗಳು ಉತ್ಪನ್ನವಾಗುತ್ತಿರಲು, ಧನಮಲ್ಲನು- “ನಾನು ನಿಮ್ಮ ಬಿಡುಗಡೆಯನ್ನು ಮಾಡಲಾ? ಮಾಡುವೆನು, ಮಾಡುವೆನು; ಆದರೆ ಮೊದಲು ನನ್ನ ವೈರಿಯ ಜೀವವನ್ನು ಹಿಂಡಿದಬಳಿಕ ನಿಮ್ಮ ಬಿಡುಗಡೆ ಮಾಡುವೆನು. ಸದ್ಯಕ್ಕೆ ನಿಮ್ಮನ್ನು ಬಿಟ್ಟು ಕೊಡುವಹಾಗಿಲ್ಲ. ನಮ್ಮ ವೈರಿಯು ನಿಮ್ಮ ಬಳಿಗೆ ಒಬ್ಬನೇ ಬರಲಿ, ಅವನನ್ನು ನಿಮ್ಮ ಸಮಕ್ಷಮಗೊಂದು ನಿಮ್ಮನ್ನು ಇಲ್ಲಿಂದ ಬಿಡಿಸಿಕೊಂಡು ಹೋಗುವೆನು. ನನ್ನ ವೈರಿಯು ನಾಳೆ ನಾಡದು ಇಷ್ಟರಲ್ಲಿ ಬಂದಾನು. ನನ್ನ ಪಾಲನ್ನು ಆ ದುಷ್ಟ ವೈರಿಯು ಅಪಹರಿಸಿದ ಬಳಿಕ ನಾನು ಹ್ಯಾಗೆ ಸೈರಿಸಲಿ? ಧನಮಲ್ಲನು ನನ್ನನ್ನು ಅತಿ ನಿಷ್ಠರವಾಗಿ ಕಾಯುವನೆಂದು ನೀವು ತಿಳಿದಿರಬಹುದು; ಆದರೆ ಧನಮಲ್ಲನು ನಿಮ್ಮ ಸಲುವಾಗಿ ನಿಷ್ಠರನಾಗಬಹುದೆ? ನನ್ನ ವೈರಿಯಾದ ರಾಮರಾಜನು ನಿಮ್ಮನ್ನು ಹುಡುಕಿಸುವದನ್ನು ಬಿಟ್ಟು, ನನಗೆ ಬಾಯಿಗೆ ಬಂದಹಾಗೆ ಮಾತಾಡಿ ಈಗ ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ನನ್ನನ್ನು ಹೊರಗೆ ಹಾಕಿದನು. ನಾನು ನಿಮ್ಮ ಮೇಲಿನ ಆಸೆಯಿಂದ ಕಷ್ಟಪಟ್ಟು ಒಂದೇಸಮನೆ ಹುಡುಕಿ ನಾಯಿಯಹಾಗೆ ನಿಮ್ಮ ಬಾಗಿಲು ಕಾಯುತ್ತ ಇಲ್ಲಿ ಬಿದ್ದಿರುತ್ತೇನೆ; ಆದರೆ ನಾಯಿಯು ರಾಮರಾಜನ ಅನ್ನಕ್ಕೆ ಜೋತು ನಿಮ್ಮನ್ನು ಕಾಯುತ್ತಿರುತ್ತದೆಂದು ತಿಳಿಯಬೇಡಿರಿ. ಕೇವಲ ನಿಮ್ಮ ಆಸೆಯಿಂದಲೇ ನಾಯಿಯು ನಿಮ್ಮ ಬಾಗಿಲು ಕಾಯುತ್ತಿರುವದು. ಕೃಷ್ಣಸರ್ಪವು ರಾಮರಾಜನ ಪ್ರಾಣಹರಣ ಮಾಡಿ ಮೆಹೆರ್ಜಾನ ರೂಪವಾದ ಚಂದನ ವೃಕ್ಷವನ್ನು ಸುತ್ತುಹಾಕಿದರೆ ಅದರ ಕೆಲಸ ತೀರಿತು” ಎಂದು ನುಡಿದು ಆ ದುಷ್ಟ ಧನಮಲ್ಲನು ಮೆಹೆರ್ಜಾನಳನ್ನು ಎವೆಯಿಕ್ಕದೆ ನೋಡಹತ್ತಿದನು. ಇದನ್ನು ನೋಡಿ, ಧನಮಲ್ಲನ ಮಾತುಗಳನ್ನು ಕೇಳಿ, ಮೆಹೆರ್ಜಾನಳ ಸರ್ವಾಂಗವು ಕಂಪಿಸಹತ್ತಿತು. ಆ ಮಹಾ ಪತಿವ್ರತೆಯು ತನ್ನ ದುರ್ದೈವವನ್ನೂ, ದುರವಸ್ಥೆಯನ್ನೂ ಹಳಿದುಕೊಳ್ಳಹತ್ತಿದಳು. ಇತ್ತ ಕಾಮುಕನಾದ ದುಷ್ಟ ಧನಮಲ್ಲನು ವಿವೇಕ ಭ್ರಷ್ಟನಾಗತೊಡಗಿದ್ದನು. ಅಷ್ಟರಲ್ಲಿ ಮಾರ್ಜೀನೆಯು ಅಲ್ಲಿಗೆ ಬಂದಳು. ಆಕೆಯ ಸಂಗಡ ಒಬ್ಬ ತರುಣಿಯು ಬಂದಿದ್ದಳು. ಆ ತರುಣಿಯ ಸರ್ವಾಂಗವು ಬುರುಕೆಯಿಂದ ಮುಚ್ಚಿಹೋಗಿತ್ತು. ಆ ತರುಣಿಯನ್ನು ಕಳಿಸಬಂದ ರಾಮರಾಜನ ನೃತ್ಯನು ಆ ತರುಣಿಯನ್ನು ಮಾಸಾಹೇಬರಿಗೆ ಒಪ್ಪಿಸಹೇಳಿ ಮಾರ್ಜೀನೆಯ ಒಪ್ಪಿಗೆಯಿಂದ ಹೊರಟುಹೋದನು.