ಪುಟ:Mahakhshatriya.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಕ್ಕಷ್ಟು ದೊಡ್ಡದಾದರೆ ಅದನ್ನು ಲೋಕದ ಶುಭಾಶುಭಗಳಿಗೆ ವಿನಿಯೋಗಿಸುವರು.”

“ಸರಿ”

“ಅದರಿಂದಲೇ ಪ್ರಪಂಚವೆಲ್ಲವೂ ದೇವತೆಗಳ ಕೈಯಲ್ಲಿರುವುದು ಎನ್ನುವರು.”

“ಸರಿ”

“ಈ ದೇವತೆಗಳನ್ನು ಕಾಲವು ಪ್ರಚೋದಿಸುವುದು. ಕಾಲವು ಶುಭಾಶುಭ ಪ್ರವರ್ತಕವೆಂದು ನಮ್ಮ ಭಾವನೆ. ಕಾಲವನ್ನು ಬಲ್ಲವನು ಕಾಲಸ್ವರೂಪನಾದ ಮಹಾವಿಷ್ಣುವು ಒಬ್ಬನೇ. ನಮಗೆ ಮನ್ವಂತರದ ಕೊನೆಯವರೆಗೂ ಆಳುವ ಅಧಿಕಾರವುಂಟು. ಪ್ರತಿಯೊಂದು ಮನ್ವಂತರದಲ್ಲೂ ದೇವತೆಗಳು, ಋಷಿಗಳು, ಪಿತೃಗಳು, ಮನು ಎಲ್ಲರೂ ಹೊಸಬರಾಗುವರು.”

“ಸರಿ ಹಾಗಾದರೆ, ಹಿಂದಿನ ಇಂದ್ರನು ಇಂದ್ರಪದವಿಯನ್ನು ಬಿಟ್ಟು ಓಡಿ ಹೋದುದೇಕೆ ?”

“ಆತನೇಕೆ ಹೋದನೆನ್ನುವುದು ಇನ್ನೂ ಸರಿಯಾಗಿ ಯಾರಿಗೂ ತಿಳಿಯದು. ನಾವೆಲ್ಲರೂ ಆತನು ಮಾಡಿದ ವೃತ್ರಹತ್ಯೆಯು ಆತನಿಗೆ ಸಹಿಸುವುದಕ್ಕೆ ಆಗದಷ್ಟು ದೊಡ್ಡದಾಗಿ ಆತನು ಓಡಿಹೋದನು ಎಂದುಕೊಂಡಿರುವೆವು. ನಾವಂದುಕೊಂಡಿರುವುದು ನಿಜವಾದರೆ ಆತನೆಲ್ಲಿಯೋ ತಪಸ್ಸು ಮಾಡುತ್ತಿರಬೇಕು. ಆತನ ತಪಸ್ಸು ಫಲವಾಗಿ ಆತನು ನಿರ್ದೋಷಿಯಾಗುವವರೆಗೂ ತಲೆ ಮರೆಸಿಕೊಂಡಿರುವನು.”

“ಆತನನ್ನು ನಿರ್ದೋಷಿಯನ್ನಾಗಿ ಮಾಡಿ ಹಿಂತಿರುಗುವಂತೆ ಮಾಡಲು ಸಾಧ್ಯವಿಲ್ಲವೆ?

ಯಜ್ಞೇಶ್ವರನು ನಕ್ಕು ಹೇಳಿದನು ; “ಸಾಧ್ಯ. ಆದರೆ ಹಾಗೆ ಮಾಡಿದರೆ, ಇಬ್ಬರು ಇಂದ್ರರಾಗುವರು. ಶಾಶ್ವತವಾದ ಇಂದ್ರನು ಬಂದರೆ, ತತ್ಕಾಲಕ್ಕೆ ಇಂದ್ರನು ಅಧಿಕಾರವನ್ನು ಬಿಟ್ಟುಕೊಡಬೇಕಾಗುವುದು. ಅದರಿಂದ.....”

"ಸುಮ್ಮನಿರುವುದು ಒಳಿತು ಎಂದು ನಿನ್ನ ಅಭಿಪ್ರಾಯ ?”

“ಹೌದು”

“ಹಾಗಾದರೆ, ಈ ನನ್ನ ಪದವಿಯು ಶಾಶ್ವತವಲ್ಲವೆಂದು ನಿನ್ನ ಅಭಿಪ್ರಾಯವೇ?”

“ದೇವ, ದೇವತೆಗಳ ಯಾವ ಪದವಿಯನ್ನು ಶಾಶ್ವತವೆನ್ನೋಣ ? ನಾವು ಚತುರ್ಮುಖ ದೃಷ್ಟಿಯಿಂದ ನೋಡಿದರೆ ಅಲ್ಪಾಯುಗಳು. ಮಾನವರ ದೃಷ್ಟಿಯಿಂದ ನೋಡಿದರೆ ದೀರ್ಘಾಯುಗಳು. ಅದರಿಂದ, ಈ ಕಾಲವೆನ್ನುವುದು ಒಬ್ಬೊಬ್ಬರಿಗೆ