ಪುಟ:Mahakhshatriya.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೇಳಿ ಅವನು ಬೆಚ್ಚಿದನು : “ಇಲ್ಲ ದೇವಿ, ನನಗೆ ಯಾವಾಗಲೂ ಸ್ತ್ರೀ ಚಾಪಲ್ಯವಿಲ್ಲ ವಲ್ಲ” ಎಂದನು.

“ಹಾಗಾದರೆ ಈಗ ಈ ಶಚೀಪ್ರಸಂಗವೇನು?”

“ಇದೇ ವಿಚಿತ್ರವಾಯಿತು ದೇವಿ. ನಾನು ಅಧಿಕಾರ ಪೂರ್ಣವಾಗಿದೆಯೇ ಎಂದು ಪ್ರಸಂಗವಶವಾಗಿ ಕೇಳಿದೆ. ನನ್ನ ಅಭಿಪ್ರಾಯವಿದ್ದುದು ‘ನನ್ನ ಮತರ್ಯ್‌ತ್ವವನ್ನು ತೆಗೆದಿದ್ದೀರಾ? ನಾನು ಕೊನೆಯವರೆಗೂ ಇಂದ್ರನಾಗಿರುವೆನೆ?’ ಎಂದು. ದೇವಗುರುಗಳು ಅದಕ್ಕೆ ‘ಶಚೀಪತಿತ್ವವು ಲಭಿಸುವವರೆಗೂ ಅಧಿಕಾರವು ಪೂರ್ಣವಾಗುವುದಿಲ್ಲ’ ಎಂದರು. ನಾನು ಮಾತಿನ ಭರದಲ್ಲಿ ‘ಹಾಗಾದರೆ ಅಧಿಕಾರವನ್ನು ಪೂರ್ಣಮಾಡಿಕೊಡಿ’ ಎಂದೆ. ಅದು ಇಷ್ಟೆಲ್ಲ ರಾದ್ಧಾಂತಕ್ಕಿಟ್ಟುಕೊಂಡಿದೆ. ಇದು ಹೇಗೆ ಮುಗಿಯುವುದೋ ನೋಡಬೇಕು.”

“ಶಚೀದೇವಿಯು ಹೇಳಿಕಳುಹಿಸಿರುವುದನ್ನು ನೋಡಿದರೆ, ಆಕೆಯು ಒಪ್ಪುವಂತಿದೆಯಲ್ಲಾ? ಒಪ್ಪಿದರೆ ಏನು ಮಾಡುವಿರಿ?”

“ಅದೆ ನನ್ನ ಧರ್ಮಸಂಕಟ. ಆಕೆಯು ಒಪ್ಪಿದರೂ ಕಾರ್ಯ ಕೆಟ್ಟಿತು. ಇದುವರೆಗೆ ದೇವಲೋಕದ ಅಪ್ಸರೆಯರನ್ನು ಅವರು ಲಭ್ಯವಾಗಿದ್ದರೂ ಕಣ್ಣೆತ್ತಿಯೂ ನೋಡದ ನಾನು ಶಚಿಯನ್ನು ಹೇಗೆ ಒಪ್ಪಿಕೊಳ್ಳಲಿ? ಆಕೆಯು ಒಪ್ಪಿಕೊಳ್ಳದಿದ್ದರೆ ದೇವಋಷಿಪಿತೃಗಳೆಲ್ಲ ನನ್ನನ್ನು ಹಂಗಿಸುವರಲ್ಲಾ ಏನು ಮಾಡಲಿ? ಇದೆ ನನಗೆ ಯೋಚನೆಯಾಗಿದೆ.”

ವಿರಜಾದೇವಿಗೆ ತನ್ನ ಗಂಡನು ಮತ್ತೆ ಯಾವ ಸ್ತ್ರೀಯನ್ನೂ ಕಾಮುಕನಾಗಿ ನೋಡಲಿಲ್ಲವೆಂದು ಏನೋ ಒಂದು ಹೆಮ್ಮೆ. ಈ ಶಚೀಪ್ರಸಂಗವು ಎರಡು ತೂಕದ ಕತ್ತಿಯಾಗಿದ್ದು ಹಾಗೂ ಕತ್ತರಿಸುವುದು, ಹೀಗೂ ಕತ್ತರಿಸುವುದು. ಮುಂದೇನಾಗುವುದೋ ಎಂದು ದಿಗಿಲು. ಆದರೂ ತನ್ನ ಗಂಡನು ಮನಃಪೂರ್ವಕವಾಗಿ ಆಕೆಯನ್ನು ಬಯಸಿಲ್ಲವೆಂದು ಒಂದು ಸಮಾಧಾನ. ಅದೇ ಏನು ಹೆಣ್ಣು ಹೃದಯ? ತಾನೊಲಿದಿರುವ ಗಂಡು ಇನ್ನೊಂದು ಹೆಣ್ಣನ್ನು ಬಯಸಿಲ್ಲ ಎಂದರೆ ಏಕೆ ಸಮಾಧಾನವಾಗಬೇಕು?

ಅಂತೂ ಇನ್ನೆರಡು ಸಲ ಅವರು ನಿಟ್ಟುಸಿರುಬಿಡುವುದರೊಳಗಾಗಿ ಶಚೀದೇವಿಯು ಬಂದಳು. ಇಂದ್ರಾಣಿಯೆಂದು ಆಡಂಬರವೇನೂ ಇಲ್ಲ. ಶಾಂತಿದೂತನಂತೆ ಬಿಳಿಯ ವಸ್ತ್ರವನ್ನುಟ್ಟಿದ್ದಾಳೆ. ಆ ವಸ್ತ್ರವು ಆಕಾಶಮಾರ್ಗದಲ್ಲಿ ಚಂದ್ರಮನ ಐಸಿರಿಯು ದಿಗಂತಗಳವರೆಗು ವ್ಯಾಪಿಸಿ ಶೋಭಿಸುತ್ತಿರುವಾಗ ಮೆರೆಯುವ ನಕ್ಷತ್ರಪಥದಂತೆ ವಜ್ರಕಣವಿಶೋಭಿತವಾಗಿದೆ. ಕೆನೆಯ ಬಣ್ಣದ