ಪುಟ:Mahakhshatriya.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨.ಪರಿಗ್ರಹಕ್ಕಿಂತ ತ್ಯಾಗ ಹೆಚ್ಚು

ನಹುಷೇಂದ್ರನು ವಿರಜಾದೇವಿಯೊಡನೆ ತನ್ನ ವಿಲಾಸಮಂದಿರದಲ್ಲಿ ವಿಶ್ರಮಿಸಿ ಕೊಳ್ಳುತ್ತಿದ್ದಾನೆ. ವಿಲಾಸಮಂದಿರದಲ್ಲಿದ್ದರೂ ಆತನಿಗೆ ಇಂದು ಏಕೋ ವಿಲಾಸವಿಲ್ಲ. ಲೋಕಾಂತರದಿಂದ ದೈತ್ಯದಾನವಗಣಗಳಿಗೆ ಯುದ್ಧವಾಗುತ್ತಿದೆಯೆಂದು ಸುದ್ದಿ ಬಂದಿರುವುದರಿಂದ ಹೀಗಾಗಿರುವುದೆಂದರೆ, ಆತನೇ ಇತ್ಯರ್ಥವನ್ನು ಹೇಳಿದ್ದಾನೆ. ದುಷ್ಟರು ಪರಸ್ಪರ ಕಾದಾಡುತ್ತಿರುವುದರಿಂದ ಲೋಕಕ್ಷೇಮವೆಂದು ಅನ್ಯಮನಸ್ಕನಾಗಿ ಅಪ್ಸರೋಗಣದ ನರ್ತನಸೇವೆಯನ್ನು ಒಪ್ಪಿಸಿಕೊಂಡಿದ್ದಾನೆ. ಹಾಗೆಯೇ ಗಂಧರ್ವಗಣದ ಸಂಗೀತಸೇವೆಯನ್ನೂ ಅಮನಃಪೂರ್ವಕವಾಗಿ ಸವೀಕರಿಸಿದ್ದಾನೆ. ಗಂಧರ್ವಾಪ್ಸರೆಯರು ಬೀಳ್ಕೊಂಡು ತೆರಳುವುದರಲ್ಲಿದ್ದಾಗ, ಚಿತ್ರರಥನಿಗೆ ಸನ್ನಿಧಾನದ ಅಪ್ಪಣೆಯಾಗಿದೆ, ಕೊಂಚ ಕಾದಿರಬೇಕೆಂದು. ವಿರಜಾದೇವಿಗೂ ಆತನ ಸ್ಥಿತಿಯು ಮನವರಿಕೆಯಾಗಿದೆ. ಆಕೆಗೆ ಕಾರಣವೂ ಗೊತ್ತಿರಬಹುದು. ಅದರಿಂದ ಸಾವಧಾನವಾಗಿ ಕಾಯುತ್ತಿದ್ದಾಳೆ.

ಅರಸನು ಒಂದು ಗಳಿಗೆಯಾದ ಮೇಲೆ ಮಾತನಾಡಿದನು. ಈಗ ವಿಷಾದ ವಿರಲಿಲ್ಲ. ಅದಕ್ಕೆ ಪ್ರತಿಯಾಗಿ ಗಂಭೀರವಾದ ಚಿತ್ತವೃತ್ತಿಯಿದ್ದಂತೆ ತೋರಿತು : “ದೇವಿ, ದೀಪದ ಪ್ರಕಾಶವು ಹೆಚ್ಚಾದಂತೆಲ್ಲ ನೆರಳೂ ದಪ್ಪವಾಗಿ ಕತ್ತಲೆಯು ದಟ್ಟವಾಗುವುದು. ಅದರಂತೆ ಆಯಿತು ನಾವು ಇಂದ್ರಪದವಿಗೆ ಒಪ್ಪಿದುದು. ಆನಂದವು ಲಭಿಸಿದರೂ ಅದರಲ್ಲಿ ದುಃಖಾನುಭಾವವು ಬರಲಿಲ್ಲ. ಬರುವುದೂ ಇಲ್ಲ. ಈ ದೇವತೆಗಳು ನಮ್ಮನ್ನು ಇಲ್ಲಿ ಉಳಿಸುವುದಿಲ್ಲ. ಏನಾದರೂ ಮಾಡಿ ಉರುಳಿಸಿಯೇ ಉರುಳಿಸುವರು. ಅಷ್ಟರೊಳಗೆ ಹಿಂದಿನ ಇಂದ್ರನು ಮಾಡದಿದ್ದುದು ಏನಾದರೂ ಮಾಡಿ ನಾವೇ ಈ ಇಂದ್ರಪದವಿಯನ್ನು ಬಿಟ್ಟು ಬಿಡೋಣ. ಈ ಹಾವಿನ ಹೆಡೆಯ ನೆರಳಲ್ಲಿ ವಾಸ ಸಾಕು. ನೀನೇನೆನ್ನುವೆ ?”

ವಿರಜಾದೇವಿಯು ನಕ್ಕು ಹೇಳಿದಳು : “ದೇವಾ, ತಮ್ಮ ಕೈಹಿಡಿದು ನಾನು ಇಂದು ಸುಖವಾಗಿದ್ದೇನೆ. ನನಗೂ ತಮಗೆ ಎನ್ನಿಸಿದಂತೆಯೇ ಎನ್ನಿಸುತ್ತದೆ. ನಮಗೆ ಆನಂದಾನುಭವಶಕ್ತಿಯು ಹೆಚ್ಚಾಗಿದೆ. ನಿಜ ಆದರೂ ನಾನು ಯೋಚಿಸಿದ್ದೇನೆ. ಈ ಆನಂದವು ಪದವೀಭಾಗ್ಯ ಸಂಪನ್ನತೆಗಳನ್ನು ಅವಲಂಬಿಸಿಲ್ಲ.