ಧರ್ಮವಿಷಯದಲ್ಲಿ ವಿಚಾರವು ಒಂದು ವಸ್ತುವನ್ನು ಅಂಗೀಕರಿಸುವುದಕ್ಕಿಂತ ಮುಂಚೆ, ಅಂಗೀಕರಿಸಿದ ಮೇಲೆ ದೊಡ್ಡದು ದೊಡ್ಡದೇ ; ಚಿಕ್ಕದು ಚಿಕ್ಕದೆ ಅಲ್ಲವೇ ?”
“ಸರಿ, ತಮ್ಮ ನಿರ್ಣಯವು ಧರ್ಮಸಮ್ಮತವಾದುದು. ಹಾಗಾದರೆ ಈ ವಿಚಾರವು ಸಪ್ತರ್ಷಿಗಳಲ್ಲಿಯೇ ಜಿಜ್ಞಾಸೆ ಮಾಡಬೇಕೇ ?”
“ಹೌದು, ಆಯಿತು. ಇದುವರೆಗೂ ತಾವು ತಮ್ಮ ವಿಷಯವನ್ನು ಹೇಳಿ ಕೇಳಿದ್ದಾಯಿತು. ನಮ್ಮ ವಿಚಾರವನ್ನು ಕೇಳುವುದಿಲ್ಲವೆ ?”
“ತಾವೇ ಹೇಳಿದಿರಲ್ಲ ಅಂಗೀಕರಿಸುವುದಕ್ಕಿಂತ ಮುಂಚೆ ವಿಚಾರ. ನಾವು ತಮ್ಮನ್ನೂ ಇಂದ್ರನನ್ನೂ ನಮಗಿಂತ ದೊಡ್ಡವರೆಂದು ಒಪ್ಪಿದ್ದೇನೆ. ಅದರಿಂದ ತಮಗಿಂತ ದೊಡ್ಡವರಾಗುವ ವಿಷಯವನ್ನು ಮಾತ್ರ ಕುರಿತು ವಿಚಾರಿಸಿದೆವು. ತಾವಾಗಿ ಏನು ಹೇಳಿದ್ದರೂ ನಾವು ಕೇಳಲು ಸಿದ್ಧರಾಗಿರುವೆವು.”
“ಸಂತೋಷ. ಸಹೃದಯರೊಡನೆ ಹೇಳಿಕೊಂಡ ಸುಖವು ಅಭಿವೃದ್ಧಿಯಾಗುವುದು, ದುಃಖವು ಹ್ರಾಸವಾಗುವುದು. ಅದರಿಂದಲೇ ಲೋಕವು ತನ್ನ ಸುಖದುಃಖಗಳನ್ನು ತನಗೆ ಬೇಕಾದವರೊಡನೆ ಹೇಳಿಕೊಳ್ಳುವುದು. ಈಗಲೂ ಹಾಗಾಗಲೆಂದು ತಮ್ಮೊಡನೆ ನನ್ನ ವಿಚಾರಗಳನ್ನು ಹೇಳಿಕೊಳ್ಳುವೆನು. ದೇವಾಚಾರ್ಯರು ಇಂದ್ರ ವಿಷಯವಾಗಿ ಮಹಾವಿಷ್ಣುವನ್ನು ಕಂಡಿದ್ದರು, ಆತನು ಇಂದ್ರನದೇ ತಪ್ಪು. ಹತ್ಯೆಯು ಗೋಚರವಾಗುತ್ತಲೂ ಹೆದರಿ ಓಡಿಹೋಗದೆ, ‘ಏನು ಮಾಡುವೆಯೋ ಮಾಡು’ ಎಂದು ತನ್ನ ಒಂದು ರೂಪವನ್ನು ಅದಕ್ಕೆ ಕೊಟ್ಟು ಇನ್ನೊಂದು ರೂಪದಿಂದ ಅದಕ್ಕೆ ಪ್ರತಿಕ್ರಿಯೆಯನ್ನು ಮಾಡಬೇಕಾಗಿತ್ತು.
ವಿಶ್ವರೂಪವಧಕ್ಕಿಂತ ಪೂರ್ವವಾಗಿ ಬರುವ ಹತ್ಯೆಯನ್ನು ಪ್ರತಿಬಂಧಿಸುವ ವಿಚಾರವನ್ನು ಯೋಚಿಸಿ ಅದನ್ನು ಹಂಚಿಹಾಕಿದಂತೆ, ವೃತ್ರವಧಕ್ಕಿಂತ ಮುಂಚೆ ಹತ್ಯೆಯನ್ನು ಕಳೆದುಕೊಳ್ಳುವ ವಿಚಾರವನ್ನು ಪೂರ್ವಭಾವಿಯಾಗಿಯೇ ಮಾಡಬೇಕಾಗಿತ್ತು. ವಿಶ್ವರೂಪ ಹತ್ಯೆಯನ್ನು ಹಂಚಿ ಹಾಕಿದವನು ವೃತ್ರಹತ್ಯೆಯನ್ನು ನಿವಾರಿಸಲು ತಾನು ಹಂಚಿಕೊಳ್ಳಬೇಕಾಗಿತ್ತು. ಈಗಲೂ ಆತನ ಶುದ್ಧಿಗಿರುವುದು ಅದೊಂದೇ ದಾರಿ. ಆತನು ಒಂದು ರೂಪದಿಂದ ಅದನ್ನು ಅನುಭವಿಸಲಿ. ಹತ್ಯೆಯಿಂದಾಗುವ ಹಾನಿಯನ್ನು ಕಳೆದುಕೊಳ್ಳಲು ಹಲವು ರೂಪದಿಂದ ತಪಸ್ಸು ಮಾಡಲಿ. ಹಿಂದೆ ಸಹಸ್ರ ಕವಚ ಸಂಹಾರಕ್ಕಾಗಿ ನಾನು ನರನಾರಾಯಣನಾಗಿರಲಿಲ್ಲವೆ ? ಹಾಗೆ ಎಂದನಂತೆ.”
style="text-indent: 1cm;">“ಹಾಗಾದರೆ, ಆ ಇಂದ್ರನು ಪರಿಶುದ್ಧನಾದ ಹಾಗೆಯೇ ! ನಾವು ಇಂದ್ರ ಪದವಿಯನ್ನು ಬಿಟ್ಟು ಸುಖವಾಗಿರಬಹುದು.”