“ಹೌದೋ ಅಲ್ಲವೋ ನೋಡು. ನೀನು ಅವ್ಯಾಪಾರಿಯಂತೆ, ತಲೆಮರೆಸಿ ಕೊಂಡು ಏಕಾಂಗಿಯಾಗಿ ಬ್ರಹ್ಮಲೋಕಕ್ಕೆ ಹೋಗುವಂತಿಲ್ಲ. ಅಥವಾ ಆತನೇ ಬಂದರೂ, ಏಕಾಂತದಲ್ಲಿ ನಿನ್ನನ್ನು ಕಂಡರೂ ಅದು ದೇವಲೋಕದಲ್ಲೆಲ್ಲಾ ಗುಲ್ಲೋ ಗುಲ್ಲಾಗುವುದು. ಈಗ ತಾನೇ ವಿಶ್ವರೂಪಾಚಾರ್ಯನು ದೇವರಾಜನನ್ನು ಸೂರಾಪಾನ ವಿಚಾರದಲ್ಲಿ ತಿರಸ್ಕರಿಸಿರುವನು. ಈ ದಿನ ನಿಮ್ಮ ನಿಮ್ಮ ಸಂದರ್ಶನವಾದರೆ, ಅರ್ಥವೇನು ? ನೀನೇ ಹೇಳು ?”
“ಆಯಿತು. ಇದನ್ನು ಸಾಧಿಸುವ ದಾರಿ ಯಾವುದು ಹೇಳು ?”
“ಬೇರೇ ಸಾಧನವೇ ಇಲ್ಲ, ಇದು ದೂತಮುಖವಾಗಿಯೇ ಆಗಬೇಕು”
“ಹಾಗಾದರೆ, ನಿನ್ನಿಂದಲೇ ಆಗಬೇಕು ಎಂದಾಯಿತು.”
“ನಾನು ಬೇಡ. ಇನ್ನು ಯಾರಾದರೂ ಹೋಗಿಬರಲಿ. ನಾನು ಹೋಗಿ ಬಂದರೆ ಅದನ್ನು ಗುಟ್ಟಾಗಿಟ್ಟಿರಲು ಸಾಧ್ಯವಿಲ್ಲ.
“ನಾನು ಕೇಳಬೇಕೆಂದಿರುವ ವಿಚಾರವನ್ನು ನಿನಗಲ್ಲದೆ ಇನ್ನು ಯಾರಿಗೂ ಹೇಳುವಂತಿಲ್ಲ.”
“ನಾನು ಬಲ್ಲೆ. ನೀನು ಕೇಳಬೇಕೆಂದಿರುವುದಿಷ್ಟು ; ನೀನು ಮತ್ತೆ ಯಾವಾಗ ಬಂದು ದೇವಾಚಾರ್ಯತ್ವವನ್ನು ವಹಿಸಿಕೊಳ್ಳುವೆಯೆಂದು ಕೇಳಬೇಕು. ಹೌದೋ ಅಲ್ಲವೋ ?”
“ನೀನು ಜಾತವೇದ, ಕೇಳಬೇಕೆ ? ಮುಖವನ್ನು ನೋಡುತ್ತಿದ್ದ ಹಾಗೆಯೇ ಭಾವವನ್ನು ಗ್ರಹಿಸುವೆ. ಆಯಿತು. ಇದಕ್ಕೆ ಮತ್ತೆ ಯಾರನ್ನು ವಿನಿಯೋಗಿಸೋಣ? ಹೇಳು.”
“ವಾಯುವನ್ನು ಕೇಳು. ಆತನು ಮಾತರೀಶ್ವನು. ಒಂದು ಕ್ಷಣದಲ್ಲಿ ಮನೋವೇಗದಿಂದ ಎಲ್ಲೆಂದರಲ್ಲಿಗೆ ಹೋಗಿಬರಬಲ್ಲವನು.”
“ಆಗಬಹುದು.”
ಯಜ್ಞೇಶ್ವರನು ಎದ್ದು ಕೈಮುಗಿದು, ಆಕಾಶದಲ್ಲಿ ಮುಷ್ಠಿಮಾಡಿ ಒಂದು ಆಸನದ ಮೇಲೆ ಆ ಮುಷ್ಠಿಯನ್ನು ಇಟ್ಟನು. ಅಲ್ಲೊಂದು ಪುರುಷಾಕೃತಿಯು ಕಾಣಿಸಿತು. ಅದು ಎದ್ದು ಇಂದ್ರಾಣಿಗೆ ಅಭಿವಂದನೆ ಮಾಡಿ “ನಾನು ವಾಯು. ನನ್ನಿಂದ ಏನಾಗಬೇಕು ? ಅಪ್ಪಣೆಯಾಗಲಿ’ ಎಂದಿತು.
ಇಂದ್ರಾಣಿಯು ಯಜ್ಞೇಶ್ವರನ ಮುಖ ನೋಡಿದಳು. ಯಜ್ಞೇಶ್ವರನು “ಮಿತ್ರ ಬೃಹಸ್ಪತಿಯ ಬಳಿಗೆ ಹೋಗಿ, ಆತನು ದೇವಲೋಕಕ್ಕೆ ಬಂದು ಧರ್ಮಾಚಾರ್ಯತ್ವವನ್ನು ಯಾವಾಗ ಪರಿಗ್ರಹಿಸುವನು ಎಂದು ಕೇಳಿಕೊಂಡು