ಪುಟ:Mahakhshatriya.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇವನನ್ನು ‘ವಿಶ್ವರೂಪನನ್ನು ಕರದುಕೊಂಡು ಹೋಗು ಎಂದವರು ಯಾರು? ಹೀಗೆ ಅವನನ್ನು ವಧೆಮಾಡು ಎಂದೇ ನಾವು ಅವನನ್ನು ಕಳುಹಿಸಿಕೊಟ್ಟುದು? ಈಗ ವಿಶ್ವರೂಪನ ತಾಯಿಗೆ ಹುಚ್ಚು ಹಿಡಿಯುವಂತಾಗಿದೆಯಲ್ಲ? ಯಾರು ಅದನ್ನು ನೋಡಬಹುದು !’ ಈ ದ್ರೋಹವು, ಅಪರಾಧವು, ಬರಿಯ ಕಾಣಿಕೆಗಳಿಂದ ಶಾಂತವಾಗುವುದಿಲ್ಲ ಅತೀಂದ್ರನೊಬ್ಬನನ್ನು ಸೃಷ್ಟಿಸುವೆನು. ಈ ಇಂದ್ರನು ಇಲ್ಲದಂತೆ, ಸ್ಥಾನಭ್ರಷ್ಟನಾಗುವಂತೆ ಮಾಡುವೆನು. ಇಲ್ಲದಿದ್ದರೆ ದಾವಾಗ್ನಿಗಿಂತ ಹೆಚ್ಚಾಗಿ ಉರಿದು ಉರಿಸುತ್ತಿರುವ ಈ ಶೋಕಾಗ್ನಿಯು ಶಮನವಾಗುವುದೆಂತು? ನೋಡು. ನೋಡು ವಿಶ್ವರೂಪನೇ ಎದುರು ಬಂದು ನಿಂತು “ಸೇಡು! ಸೇಡು” ಎಂದು ಕೂಗುತ್ತಿರುವನು. ನೀನು ಮಾತಾಡಬೇಡ. ನೀನು ಪುಣ್ಯವಂತ! ನಿನಗೆ ಮಕ್ಕಳು ಸತ್ತು ಗೊತ್ತಿಲ್ಲ ಅಲ್ಲದೆ, ನಿನ್ನ ಸಂತಾನವು ಬೇಕಾದಷ್ಟಿದೆ. ಸುರಾಸುರರಿಬ್ಬರೂ ನಿನಗೆ ಮಕ್ಕಳಾಗಿರುವುದರಿಂದ, ನೀನು ಪರಸ್ಪರ ಅವರು ಮಾಡುವ ವಿಶ್ವಾಸ ವಿದ್ವೇಷಗಳನ್ನು ಸಹಿಸಬಲ್ಲೆ, ನನ್ನಿಂದ ಸಾಧ್ಯವಿಲ್ಲ. ಪಾಪವೆನ್ನುವೆಯೇನೋ? ಅದೇನಾದರೂ ಇರಲಿ. ಮೊದಲು ಈ ದುಃಖವನ್ನು ಕಳೆದುಕೊಂಡು ಅನಂತರ ಪಾಪ ನಿವಾರಣಕ್ಕಾಗಿ ತಪಸ್ಸನ್ನು ಆಚರಿಸುವೆನು. ನೀನು ಅಡ್ಡಬರಬೇಡ” ಎಂದು ಖಂಡಿತವಾಗಿ ನುಡಿದನು.

ಕಶ್ಯಪನು ಎಲ್ಲವನ್ನೂ ಕೇಳಿದನು. “ಸರಿ ಜಗತ್ತಿನಲ್ಲಿ ಏನೋ ಒಂದು ವಿಪ್ಲವವಾಗಬೇಕಾಗಿದೆ. ನಾನೇಕೆ ಅಡ್ಡಿ ಬರಲಿ ? ಆಗಬೇಕಾದುದು ಆಗಿಹೋಗಲಿ. ನಾನು ಅಡ್ಡಿಯಾಗಿ ಭವಿಷ್ಯತ್ತು ಮಂಗಳವಾಗುವ ಹಾಗೆ ಮಾಡಬಹುದು ಏಕೆ? ಉಪ್ಪು ತಿಂದವರು ನೀರು ಕುಡಿಯಲಿ” ಎಂದುಕೊಂಡು ತ್ವಷ್ಟೃವಿಗೆ ಏನೂ ಹೇಳದೆ ಸುಮ್ಮನೆ ಬಂದನು.

ತ್ವಷ್ಟೃವನ್ನು ನೋಡಿಕೊಂಡು ದುಃಖೋಪಶಮನವನ್ನು ಹೇಳಿ ಹೋಗಲು ದಾನವಮುಖಂಡರು ಬಂದರು. ತ್ವಷ್ಟೃವು ಅವರಿಗೂ ಅದೇ ಮಾತು ಹೇಳಿದನು- “ನೋಡಿ, ಇಂದ್ರನಿಗೆ ಅಹಂಕಾರವು ತಾನೇತಾನಾಗಿದೆ. ಇವನಿಗೆ ನಾವೆಲ್ಲರೂ ಸೇರಿಯಲ್ಲವೆ ದೇವರಾಜಾಭಿಷೇಕವನ್ನು ಮಾಡಿದುದು? ತಾನಾಗಿ ಬಂದು ನಮ್ಮ ತೇಜಸ್ಸೆಲ್ಲ ಕ್ಷೀಣವಾಗಿ ಹೋಗುತ್ತಿದೆ. ನಮ್ಮ ಶತ್ರುಗಳ ತೇಜಸ್ಸು ಪ್ರಬಲವಾಗುತ್ತಿದೆ. ಅವರ ಕೈಮೀರಿ ನಾವು ವಿನಾಶವಾಗುವ ಮುಂಚೆ ನಮ್ಮನ್ನು ಉದ್ಧರಿಸುವ ಆಚಾರ್ಯನು ಬೇಕು ಎಂದಲ್ಲವೆ ವಿಶ್ವರೂಪನನ್ನು ಕರೆದುಕೊಂಡು ಹೋದುದು? ಅವನು ಇವನಿಗೆ ನಾರಾಯಣಕವಚವನ್ನು ಅನುಗ್ರಹಿಸಿ ಕೊಟ್ಟು ಗುರುವಾದನಲ್ಲ! ಗುರುವಿಗೆ ವಿದ್ರೋಹ ಮಾಡಬಹುದೆ ? ಆಚಾರ್ಯನಾಗಿ ಧರ್ಮಕರ್ಮಗಳನ್ನು