ಪುಟ:Mahakhshatriya.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೂಪಿಸಿಕೊಳ್ಳುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಆಗಲೇ ದೇವತೆಗಳು ಅಮರಾವತಿಯನ್ನು ಬಿಟ್ಟು ಓಡಿ ಹೋಗಿರುವಂತೆ, ತಾವು ನಿರಾತಂಕವಾಗಿ ಅಮರಾವತಿಗೆ ಅಧೀಶರಾಗಿರುವಂತೆ ಭಾವನೆ.

ದಾನವಸೇನೆಯು ದೇವಲೋಕದ ಮೇಲೆ ಧಾಳಿಯಿಟ್ಟಿತು. ದೇವೇಂದ್ರನು ಲೋಕಪಾಲಕರನ್ನೆಲ್ಲಾ ಸೇರಿಸಿಕೊಂಡು ರಣಾಂಗಣಕ್ಕೆ ಬಂದಿದ್ದಾನೆ. ಎರಡು ಸೇನೆಗಳಿಗೂ ಚೂಣೀಯುದ್ಧವಾಯಿತು. ದಾನವಸೇನಾಸಮೂಹದ ನಡುವೆ, ಕಿರುಗಿಡಗಳ ನಡುವೆ ನಿಂತಿರುವ ಮಹಾವೃಕ್ಷದಂತೆ, ಮೆರೆಯುತ್ತಿರುವ ವೃತ್ರವನ್ನು ನೋಡಿಯೇ ದೇವತೆಗಳು ಹೆದರಿ, ದೇವೇಂದ್ರನ ಕಡೆಗೆ ನೋಡುತ್ತಾರೆ. ಆತನೂ ಐರಾವತವನ್ನೇರಿದ್ದರೂ, ವೃತ್ರನನ್ನು ಕಂಡು ಭಯಪಡುತ್ತಾನೆ. ತಾನೇರಿರುವ ಐರಾವತದ ನಾಲ್ಕರಷ್ಟಾದರೂ ಇರುವ ಆ ದೇಹವನ್ನು ಕಂಡು ಹೆದರದೆ ಇರುವುದೆಂತು? ಸಾಲಿಗ್ರಾಮಕ್ಕಿಂತ ಕಪ್ಪಾದ ದೇಹ ! ಸೂರ್ಯನ ಪ್ರಕಾಶವು ಪ್ರಮುಖವಾಗಿದ್ದರೂ, ಅಮಾವಾಸ್ಯೆಯ ಕಾರಿರುಳ ಕಪ್ಪೆಲ್ಲವೂ ಒಟ್ಟುಗೂಡಿದಂತೆ ಬಂದಿರುವ ಆ ಮೂರ್ತಿಯ ಉನ್ನತವೂ ವಿಶಾಲವೂ ಆದ ಆ ದೇಹ ಒಂದು ಸಣ್ಣ ಬೆಟ್ಟದಂತಿದೆ. ಅದನ್ನು ಕಂಡು ದೇವತೆಗಳೂ ಅವರ ದೊರೆಯೂ ಹೆದರದಿರುವುದು ತಾನೇ ಹೇಗೆ?

ಅದಕ್ಕೆ ತಕ್ಕಂತೆ ಯುದ್ಧವು ಆರಂಭಿಸುತ್ತಿದ್ದ ಹಾಗೇ, ಅವನೇ ದಾರಿ ಮಾಡಿಕೊಂಡು ಮುಂದೆ ಬಂದನು. ದಾನವರು ಅಡ್ಡಡ್ಡವಾಗಿ ನಾಲ್ಕು ಆನೆಗಳು ಸಂಚರಿಸುವುದಕ್ಕೆ ಬೇಕಾದಷ್ಟು ದಾರಿಯನ್ನು ಮಾಡಿದ್ದಾರೆ. ವೃತ್ರನು, “ಆ ಇಂದ್ರನೆಲ್ಲಿ?” ಇಂದ್ರ ! ಇಂದ್ರನೆಲ್ಲಿ ? ಗುರುವೂ, ಭ್ರಾತೃವೂ, ವೇದಾಧ್ಯಯನ ಸಂಪನ್ನನೂ ಆದ ವಿಶ್ವರೂಪಾಚಾರ್ಯನನ್ನು ಕೊಲೆ ಮಾಡಿದ ಆ ಪಾತಕಿಯೆಲ್ಲಿ?” ಎಂದು ಅಬ್ಬರಿಸುತ್ತಾ ಮುಂದೆ ಬಂದಿದ್ದಾನೆ. ಅವನ ಗರ್ಜನೆಯನ್ನು ಕೇಳಿಯೇ ಲೋಕಪಾಲಕರು ಹೆದರುತ್ತಾರೆ. ಇನ್ನೆಲ್ಲಿ ಅವರು ಎದುರು ಬೀಳುವುದು?

ವೃತ್ರನು ಬರುತ್ತಿದ್ದಾನೆ. ಕ್ರೀಡಾಂಗಣದಲ್ಲಿ ಕ್ರೀಡಾಪಟುವು ಎಸೆದ ಚೆಂಡು ಹೋಗುವಂತೆ ಹೋಗುತ್ತಿದ್ದಾನೆ. ಅವನ ಆರ್ಭಟವನ್ನು ಕೇಳಿ ಎಲ್ಲರಂತೆ ಇಂದ್ರನೂ ಹೆದರಿದ್ದಾನೆ. ಐರಾವತದಿಂದ ಧುಮುಕಿ ಓಡಿಹೋಗಲೇ ಎನ್ನಿಸುತ್ತದೆ. ಅವನ ವೀರ ಗರ್ಜನೆಯನ್ನು ಕೇಳಿ ಎದೆಯು ನಡುಗುತ್ತದೆ. ವಿಶ್ವರೂಪಾಚಾರ್ಯನ ತೇಜಸ್ಸೇ ಈ ಘೋರಾಕಾರವನ್ನು ಪಡೆದು ಎದುರು ಬರುವಂತಿದೆ. ಸಾಯುವಾಗ ಅವನು ಮಡಿದ ವಿಕಟಾಟ್ಟಹಾಸವು ಒಂದಕ್ಕೆ ನೂರಾಗಿ ಕಿವಿಗೆ ಬಿದ್ದು ಹೃದಯವನ್ನು ಹೊಕ್ಕು ಹಿಡಿದು ಅಲ್ಲಾಡಿಸುವಂತಿದೆ. ಚಳಿಯು ಹಿಡಿದಂತಾಗಿದೆ. ನಡುಗಿಸುತ್ತಿದ್ದಾನೆ.